Select Page

Advertisement

ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಅಂಗವಾಗಿ ಪಾದಯಾತ್ರೆ

ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಅಂಗವಾಗಿ ಪಾದಯಾತ್ರೆ

ಬೆಳಗಾವಿ : ಶ್ರೀಶೈಲ ಪೀಠಕ್ಕೆ ಜಗದ್ಗುರುಗಳ ದ್ವಾದಶ ಪೀಠಾರೋಹಣದ ಅಂಗವಾಗಿ ಧರ್ಮ ಜಾಗೃತಿಯ ಸಲುವಾಗಿ ಅ.29 ರಿಂದ ಜ. 15ರ ವರೆಗೆ ಯಡೂರ ಕ್ಷೇತ್ರದಿಂದ ಶ್ರೀಶೈಲ ಮಹಾಕ್ಷೇತ್ರದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.

ಗುರುವಾರ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇತಿಹಾಸ ಪ್ರಸಿದ್ದ ಚಿಕ್ಕೋಡಿ ತಾಲೂಕಿನ ಯಡೂರ ಕ್ಷೇತ್ರದಿಂದ ಶ್ರೀಶೈಲ ಮಹಾಕ್ಷೇತ್ರದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ‌. ಪಂಚಪೀಠಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುದೀರ್ಘವಾದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ನಾಡಿನ ಎಲ್ಲ ಭಕ್ತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಪಾದಯಾತ್ರೆಯು ಧಾರ್ಮಿಕವಾಗಿ, ಸಾಮಾಜಿಕವಾಗಿ, ಜಾಗೃತಿಯನ್ನು ಮೂಡಿಸುವ ಸದುದ್ದೇಶದಿಂದ ಆಯೋಜಿಸಲಾಗಿದ್ದು, ಇದಕ್ಕೆ ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.ಪಾದಯಾತ್ರೆ ನಡೆಯುವ ಸುಮಾರು‌ 560 ಕಿ.ಮೀ ದಾರಿಯ ಎರಡೂ ಕಡೆಗಳಲ್ಲಿ ಗಿಡ ನಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪರಿಸರ, ಧರ್ಮ, ಸಾವಯವ, ಕೃಷಿ ಹಾಗೂ ಆರೋಗ್ಯ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಇಷ್ಟ ಲಿಂಗ ದೀಕ್ಷೆ ನೀಡುವ ದಿಶ್ಚಟಗಳ ಭಿಕ್ಷೆ ಬೇಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ಸನ್ನಿಧಾನದಲ್ಲಿ ಅ.29 ರಂದು ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಬಾಗಲಕೋಟ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ಗ್ರಾಮ, ಪಟ್ಟಣಗಳ ಮೂಲಕ ತೆಲಂಗಾಣ ಮತ್ತು ಆಂದ್ರಪ್ರದೇಶವನ್ನು ಪ್ರವೇಶ ಮಾಡಿ ಅಂತಿಮವಾಗಿ ನ.30 ರಂದು ಪಾದಯಾತ್ರೆಯು ಶ್ರೀಶೈಲ ಕ್ಷೇತ್ರವನ್ನು ತಲುಪಲಿದೆ ಎಂದರು.

ಪಾದಯಾತ್ರೆ ಮುಕ್ತವಾದ ಬಳಿಕ 42 ದಿನ ಶ್ರೀಶೈಲ ಜಗದ್ಗುರುಗಳ ತಪೋನುಷ್ಠಾನವು ಶ್ರೀಶೈಲ ಕ್ಷೇತ್ರದಲ್ಲಿ ನೆರವೇರಲಿದೆ. ಈ ವೇಳೆ ನಿತ್ಯ ಲಿಂಗೋದ್ಯವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ನಡೆಯಲಿದೆ ಎಂದರು.

ಜ.10 ರಿಂದ 15ರ ವರೆಗೆ 6 ದಿನಗಳ ಕಾಲ ಶ್ರೀಶೈಲ ಮಹಾಕ್ಷೇತ್ರದಲ್ಲಿ ಸಮಾರೋಪದ ವಿವಿಧ ಸಮಾರಂಭಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಅಖಿಲ‌ ಭಾರತ ವೀರಶೈವ ಮಹಾಸಭೆಯ ಅಧಿವೇಶನವನ್ನು ಆಯೋಜಿಸಲಾಗಿದೆ. ಜೊತೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಹಾಗೂ ಕನ್ನಡ, ಮರಾಠಿ,‌ತೆಲಗು ವೀರಶೈವ ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದರು.
ಆಂದ್ರ ಪ್ರದೇಶದ ಸರಕಾರ ಶ್ರೀ ಶೈಲ ಪೀಠದ ಅಭಿವೃದ್ಧಿಗೆ 10 ಎಕರೆ ಭೂಮಿಯಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಅಭಿವೃದ್ಧಿ ಕಾರ್ಯಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!