ಗೆಲುವಿನ ಖುಷಿಯಲ್ಲಿ ಕಣ್ಣೀರಿಟ್ಟ ಹಿಟ್ ಮ್ಯಾನ್ ರೋಹಿತ್ ; ಸಂತೈಸಿದ ವಿರಾಟ್
ಬೆಂಗಳೂರು : ಟಿ – 20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಪಡೆ ಫೈನಲ್ ತಲುಪಿದೆ. ಪಂದ್ಯದ ಗೆಲುವಿನ ನಂತರ ಹಿಟ್ ಮ್ಯಾನ್ ರೋಹಿತ್ ಶರ್ಮ ಸಂತೋಷದ ಕಣ್ಣೀರು ಹಾಕಿದ್ದು ಸಧ್ಯ ಭಾರತೀಯರ ಹೃದಯ ಮಿಡಿಯುವಂತೆ ಮಾಡಿದೆ.
ಈ ವಿಶ್ವಕಪ್ ನಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಸೋಲದೆ ಸತತ ಗೆಲುವಿನ ಮೂಲಕ ಪೈನಲ್ ತಲುಪಿದೆ. ಆದರೆ ಕಳೆದ ಏಕದಿನ ವಿಶ್ವಕಪ್ ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಎಡವಿತ್ತು. ಈ ಸಂದರ್ಭದಲ್ಲಿ ನಾಯಕ ರೋಹಿತ್ ಸೇರಿದಂತೆ ಅನೇಕ ಆಟಗಾರರು ಕಣ್ಣೀರು ಹಾಕಿದ್ದರು. ಆದರೆ ಈ ಬಾರಿ ಕಪ್ ಗೆಲುವಿನ ವಿಶ್ವಾಸದಲ್ಲಿರುವ ಭಾರತ ತಂಡ ಗೆಲುವಿನಿಂದ ನಾಯಕ ರೋಹಿತ್ ಕಣ್ಣೀರು ಹಾಕಿದ್ದಾರೆ.
ಪಂದ್ಯ ಮುಕ್ತಾಯದ ನಂತರ ಖುಷಿಯಿಂದ ಕಣ್ಣೀರು ಹಾಕುತ್ತಿದ್ದ ಕ್ಯಾಪ್ಟನ್ ರೋಹಿತ್ ಶರ್ಮ ಅವರ ಬೆನ್ನುತಟ್ಟಿ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂತೈಸಿದ್ದು ವಿಶೇಷವಾಗಿತ್ತು. ಇಬ್ಬರು ಸ್ಟಾರ್ ಆಟಗಾರರು ಅವಿನಾಭಾವ ಸ್ನೇಹ ಹೊಂದಿದ್ದು ಸೋಲು ಹಾಗೂ ಗೆಲುವಿನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ತೋರುತ್ತಿದೆ.
ಗುರುವಾರ ನಡೆದ ವಿಶ್ವಕಪ್ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತ್ತು. ಮಳೆ ಅಡಚಣೆ ನಡುವೆ ನಾಯಕ ರೋಹಿತ್ ಶರ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. 39 ಎಸೆತದಲ್ಲಿ ಭರ್ಜರಿ 57 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ – 47 ಹಾಗೂ ಹಾರ್ಧಿಕ್ ಪಾಂಡ್ಯ 23 ರನ್ ಗಳಿಂದ ಭಾರತ ಒಟ್ಟು 171 ರನ್ ಕಲೆಹಾಕಿತ್ತು.
172 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಭಾರತದ ಪರ ಕುಲದೀಪ್ – 03, ಅಕ್ಷರ್ ಪಟೇಲ್ – 03 ಹಾಗೂ ಬೂಮ್ರಾ – 02 ವಿಕೆಟ್ ಕಬಳಿಸಿ ಆಂಗ್ಲರನ್ನು ಕೇವಲ ( 16.3 ) ಓವರ್ ನಲ್ಲಿ 103 ರನ್ ಗೆ ಕಟ್ಟಿ ಹಾಕಿದರು.
ಭಾರತ ಹಾಗೂ ಸೌತ್ ಆಫ್ರಿಕಾ ನಡುವೆ ಶನಿವಾರ ರಾತ್ರಿ 8 ಗಂಟೆಗೆ ಪೈನಲ್ ಪಂದ್ಯ ನೆರವೇರಲಿದೆ.