ಭೀಕರ ರಸ್ತೆ ಅಪಘಾತ 13 ಸಾವು ; ಸವದತ್ತಿ ಯಲ್ಲಮ್ಮ ದರ್ಶನ ಪಡೆದು ವಾಪಸ್ ತೆರಳುವಾಗ ದುರ್ಘಟನೆ
ಹಾವೇರಿ : ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದು ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ನಿಂತಿದ್ದ ಲಾರಿಗೆ ಟಿ.ಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ 13 ಜನ ಮೃತಪಟ್ಟ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿಯ ಗುಂಡೇಣಹಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದ್ದು ಮೃತರೆಲ್ಲ ಶಿವಮೊಗ್ಗ ಮೂಲದವರು ಎಂದು ತಿಳಿದುಬಂದಿದೆ. ನಿಂತಿದ್ದ ಲಾರಿಗೆ ಟಿಟಿ ವಾಹನ ಜೋರಾಗಿ ಗುದ್ದಿದ್ದು ಈ ಅವಘಡಕ್ಕೆ ಕಾರಣವಾಗಿದೆ.
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ಪರಶುರಾಮ – 45, ಭಾಗ್ಯ – 40, ನಾಗೇಶ್ – 50, ವಿಶಾಲಾಕ್ಷಿ – 50, ಸುಭದ್ರಾಬಾಯಿ – 65, ಪುಣ್ಯ – 50, ಮಂಜುಳಾ ಬಾಯಿ – 57, ಆದರ್ಶ – 23, ಮಾನಸಾ -24, ರೂಪಾ – 40, ಮಂಜುಳಾ – 50, ಜೊತೆಗೆ 4 ಹಾಗೂ 6 ವರ್ಷದ ಮಗು ಮೃತಪಟ್ಟಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಹೊರತಗೆಯುವ ಕಾರ್ಯ ಮುಂದುವರಿಸಿದ್ದಾರೆ.