
ಬೆಳಗಾವಿ : ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳಾ ಅಧಿಕಾರಿ ಸೇರಿ 13 ಜನರಿಗೆ ಜೈಲು ಶಿಕ್ಷೆ

ಬೆಳಗಾವಿ : ನನ್ನ ಮೇಲೆ ಹೆಸ್ಕಾಂ ಅಧಿಕಾರಿ ಅತ್ಯಾಚಾರ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹೆಸ್ಕಾಂ ಸಹಾಯಕ ಇಂಜಿನಿಯರ್ ಬಿ.ವಿ ಸಿಂಧು ( ಪ್ರಸ್ತುತ ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ) ಸುಳ್ಳು ದೂರು ದಾಖಲಿಸಿದ್ದರು.
2014 ರಲ್ಲಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಹೆಸ್ಕಾಂ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಗಿ ಎಂಬುವವರ ವಿರುದ್ಧ ಲೈಂಗಿಕ ಕಿರುಕುಳ, ಜೀವ ಬೆದರಿಕೆ ಆರೋಪದ ಮೇಲೆ ಹೆಸ್ಕಾಂ ಸಹಾಯಕ ಇಂಜಿನಿಯರ್ ಬಿ.ವಿ ಸಿಂಧು ಸೇರಿ ಒಟ್ಟು 13 ಜನ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ತುಕಾರಾಮ ಮಜ್ಜಗಿ ಅವರನ್ನು ಬಂಧಿಸಿ ಪೊಲೀಸರು ಜೈಲಿಗೂ ಹಾಕಿದ್ದರೆ. ಆದರೆ ಈ ಕುರಿತು ಸಮಗ್ರ ತನಿಖೆ ಕೈಗೊಂಡಾಗ ಇವರ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂಬುದು ತಿಳಿದುಬಂದಿತ್ತು. ಈ ಕುರಿತು ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ಸಧ್ಯ ಈ ಪ್ರಕರಣ ಕುರಿತು ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹೆಸ್ಕಾಂ ಅಧಿಕಾರಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಹೆಸ್ಕಾಂ ಸಹಾಯಕ ಇಂಜಿನಿಯರ್ ಬಿ.ವಿ ಸಿಂಧು ಸೇರಿ 13 ಜನ ಆರೋಪಿಗಳಿಗೆ 3 ವರ್ಷ 6 ತಿಂಗಳು ಜೈಲುಶಿಕ್ಷೆ ಹಾಗೂ ತಲಾ ಆರೋಪಿಗಳಿಗೆ 86 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಎಲ್. ವಿಜಯಲಕ್ಷ್ಮಿ ದೇವಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಬಿ.ವ್ಹಿ.ಸಿಂಧು ಸೇರಿ ಹೆಸ್ಕಾಂ ಸಹಾಯಕ ಮಾರ್ಗದಾಳು ನಾಥಾಜಿ ಪಾಟೀಲ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಜಿತ್ ಪೂಜಾರಿ, ಸಹಾಯಕ ಮಾರ್ಗದಾಳು ಮಲ್ಲಸರ್ಜ ಶಹಪೂರಕರ, ಕಿರಿಯ ಇಂಜನಿಯರ ಸುಭಾಷ ಹಲ್ಲೊಳ್ಳಿ, ಮಾರ್ಗದಾಳು ಈರಪ್ಪಾ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ.
ಸ್ಟೇಷನ್ ಅಟೆಂಡರ್ ಗ್ರೇಡ್-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮನ್‌ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ ಹಾಗೂ ನಿವೃತ್ತ ಸಹಾಯಕಿ ದ್ರಾಕ್ಷಾಯಣಿ ನೇಸರಗಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ಪ್ರಮುಖ ಆರೋಪಿ ಹೆಸ್ಕಾಂ ಸಹಾಯಕ ಇಂಜಿನಿಯರ್ ಬಿ.ವಿ ಸಿಂಧು ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು ಹೆಸ್ಕಾಂ ನಲ್ಲಿ ಕೆಲಸ ಮಾಡುತ್ತಿದ್ದ ಇತರೇ ಆರೋಪಿತರ ಪ್ರಚೋದನೆಗೆ ಒಳಗಾಗಿ ಸುಳ್ಳು ಪ್ರಕರಣ ದಾಖಲಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣವನ್ನು ಸರ್ಕಾರಿ ಅಭಿಯೋಜಕರಾಗಿ ಮುರಳಿಧರ ಕುಲಕರ್ಣಿ ಮುನ್ನಡೆಸಿದ್ದರು.
