Video – ಲಕ್ಷ್ಮಣ ಸವದಿಗೆ ಕನಿಷ್ಠ ಜ್ಞಾನ ಬೇಕು – ಏನಂದ್ರು ರಮೇಶ್ ಜಾರಕಿಹೊಳಿ
ಅಥಣಿ : ಮಹೇಶ್ ಕುಮಠಳ್ಳಿ ಅಥಣಿಯಿಂದ ಸ್ಪರ್ಧೆ ಕುರಿತು ಈಗಾಗಲೇ ನಾಯಕರ ಮಧ್ಯೆ ಮಾತಿನ ಸಮರ ಪ್ರಾರಂಭವಾಗಿದ್ದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕುರಿತು ರಮೇಶ್ ಜಾರಕಿಹೊಳಿ ಹಲವು ವಿಚಾರ ಹಂಚಿಕೊಂಡಿದ್ದಾರೆ.
ಮಹೇಶ್ ಕುಮಠಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ನಿಶ್ಚಿತ. ಸವದಿ ಅವರಿಗೆ ಕನಿಷ್ಠ ಜ್ಞಾನ ಬೇಕು. ಮಹೇಶ್ ಕುಮಠಳ್ಳಿ ತ್ಯಾಗದಿಂದ ಬಿಜೆಪಿ ಸರ್ಕಾರವಾಗಿದೆ. ಸವದಿ ಈಗಾಗಲೇ ಪರಿಷತ್ ಸದಸ್ಯರಾಗಿ ಅವದಿ ಹೊಂದಿದ್ದಾರೆ. ಮತ್ತೆ ಯಾವ ಕಾರಣಕ್ಕೆ ಚುನಾವಣೆ ಸ್ಪರ್ಧೆ ಎಂಬುದು ತಿಳಿಯುತ್ತಿಲ್ಲ ಎಂದರು.
ಅಥಣಿಯಲ್ಲಿ ಈ ಕುರಿತು ಮಾತನಾಡಿದ ಜಾರಕಿಹೊಳಿ. ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಹಾಲಿ ಶಾಸಕ ಮಹೇಶ ಕುಮಠಳ್ಳಿಗೆ ಪಕ್ಷದ ವರಿಷ್ಠರು ಹಾಗೂ ಹೈಕಮಾಂಡ್ ಟಿಕೆಟ್ ನೀಡುತ್ತಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ನಾನು ಗೋಕಾಕ ಮತಕ್ಷೇತ್ರದಿಂದ ಸ್ಪರ್ಧೆ ಮಾಡದೇ ರಾಜಕೀಯ ನಿವೃತ್ತಿ ಹೊಂದುತ್ತೆನೆ ಎಂದು ಹೇಳಿದರು.
ಅಥಣಿಗೆ ಇಂದಿನ ಭೇಟಿಯ ಮೂಲ ಉದ್ದೇಶ ಬರುವ ದಿ.28 ರಂದು ಕೊಟ್ಟಲಗಿ, ಕಕಮರಿ ಶ್ರೀ ಅಮ್ಮಾಜೆಶ್ವರಿ ಏತ ನೀರಾವರಿಯ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಈ ಬಗ್ಗೆ ವಿವಿಧ ಮುಖಂಡರ ಜೊತೆ ಮತ್ತು ಕಾರ್ಯಕರ್ತರ ಜೊತೆ ಚರ್ಚಿಸಲು ಆಗಮಿಸಿದ್ದೇನೆ.
ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ ಅವರೊಂದಿಗೆ ನಮ್ಮ ಹಳೆಯ ಸಂಭಂದವಿದೆ.ಇದಕ್ಕೆಲ್ಲ ಬೇರೆ ಅರ್ಥ ಕಲ್ಪಿಸಬಾರದು ಎಂದು ಹೇಳಿದ ಅವರು ಅಥಣಿ ಮತಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಟಿಕೆಟ್ ನೀಡದಿದ್ದರೆ ತಮ್ಮ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ನಾನು ಕುಮಟಳ್ಳಿ ಅವರಿಗೆ ಟಿಕೆಟ್ ನೀಡದಿದ್ದರೆ ಗೋಕಾಕ ಮತಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಪಕ್ಷದ ವರಿಷ್ಠರು ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲವಿಲ್ಲ ಎಂದಿದ್ದಾರೆ. ಟಿಕೆಟ್ ನೀಡುತ್ತಾರೆಂಬ ಆತ್ಮವಿಶ್ವಾಸವಿದೆ, ಒಂದು ವೇಳೆ ನೀಡದಿದ್ದರೆ ಮಹೇಶ್ ಕುಮಟಳ್ಳಿ ಮತ್ತು ನಾನು ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಹೇಳಿದರು.
ಅಥಣಿ ಮತಕ್ಷೇತ್ರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಿ ಬೆಂಬಲ ಕೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ ಲಕ್ಷ್ಮಣ ಸವದಿ ಬುದ್ಧಿವಂತ ಹಾಗೂ ಪ್ರಜ್ಞಾವಂತ ರಾಜಕಾರಣಿ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನೂ 5 ವರ್ಷ ಅವರದ್ದು, ವಿಧಾನ ಪರಿಷತ್ತ ಅಧಿಕಾರವಿದೆ. ಸವದಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರೆ ಅವರು ಯೋಚನೆ ಮಾಡಬೇಕು.ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ನಾವು ಮುಂದುವರೆಯುತ್ತಿದ್ದೇವೆ.ಮಾಧ್ಯಮದವರು ಇದನ್ನು ಟ್ವಿಸ್ಟ ಮಾಡಬೇಡಿ ಎಂದು ಹೇಳಿದರು.
ನಂತರ ಕಾರ್ಯಕರ್ತರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಶಾಸಕ ಮಹೇಶ ಕುಮಟಳ್ಳಿಗೆ ಸಿಗುತ್ತದೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಬರುವ ದಿ. 28ರಂದು ಮುಖ್ಯಮಂತ್ರಿಗಳು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಆಗಮಿಸಬೇಕೆಂದು ಕರೆ ನೀಡಿದರು.