ಬೆಂಗಳೂರು : ಕೇಂದ್ರ ಸರ್ಕಾರ ಮತ್ತೆ ಮೂವರಿಗೆ ಭಾರತರತ್ನ ಘೋಷಣೆ ಮಾಡಿದ್ದು ಇದರಲ್ಲಿ ಇಬ್ಬರು ಮಜಿ ಪ್ರಧಾನಿಗಳು ಹಾಗೂ ಓರ್ವ ಕೃಷಿ ತಜ್ಞರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಹಾಗೂ ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಘೋಷಣೆ ಮಾಡಲಾಗಿತ್ತು.‌ ಈಗ ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಎಮ್ ಎಸ್  ಸ್ವಾಮಿನಾಥನ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಈ ಕುರಿತು ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಮೂವರು ಮಹಾನ್ ನಾಯಕರಿಗೆ ಪ್ರಶಸ್ತಿ ಘೋಷಣೆ ಮಾಡಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ‌.

ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ಆಂಧ್ರಪ್ರದೇಶದ ಹೆಮ್ಮೆಯ ಪುತ್ರ ಪಿ.ವಿ.ನರಸಿಂಹ ರಾವ್, ರೈತರಿಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದ ಉತ್ತರಪ್ರದೇಶದ ಹೆಮ್ಮೆಯ ಚೌಧರಿಯ ಚರಣ್ ಸಿಂಗ್ ಮತ್ತು ಭಾರತದ ಕೃಷಿ ಅಭಿವೃದ್ಧಿಗೆ ಅಭೂತಪೂರ್ವ ಕೊಡುಗೆ ನೀಡಿದ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಒಟ್ಟಿನಲ್ಲಿ ತಡವಾದರು ಸೂಕ್ತ ಸಾಧಕರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷದ ಸಂಗತಿ.