ರಾಮದುರ್ಗ ಗದ್ದುಗೆಗಾಗಿ ಹಳೆ ತಲೆಗಳ ನಡುವೆ ಗುದ್ದಾಟ ಫಿಕ್ಸ್?
ರಾಮದುರ್ಗ : ಈಗಾಗಲೇ ರಾಮದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದ್ದು ಮಾಜಿ ಶಾಸಕ ಅಶೋಕ್ ಪಟ್ಟಣ ಅವರಿಗೆ ಟಿಕೆಟ್ ಪೈನಲ್ ಮಾಡಿದೆ. ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಹಲವಾರು ಪೈಪೋಟಿ ನಡೆಸಿದ್ದರ ನಡುವೆಯೂ ಸಿದ್ದರಾಮಯ್ಯ ಆಪ್ತ ಪಟ್ಟಣ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುದ್ದಾರೆ.
ಇನ್ನೂ ಬಿಜೆಪಿಯಲ್ಲಿಯೂ ಟಿಕೆಟ್ ಗೊಂದಲ ಆಗುವಂತಹ ವಾತಾವರಣ ನಿರ್ಮಾಣವಾಗಿಲ್ಲ. ಪಕ್ಷ ನಡೆಸಿರುವ ಸಮೀಕ್ಷೆಯಂತೆ ಮಹಾದೇವಪ್ಪ ಯಾದವಾಡ ಪರ ಮತದಾರರು ಒಲವು ತೋರಿದ್ದು ಈ ಬಾರಿಯು ಅವರಿಗೆ ಟಿಕೆಟ್ ಕೊಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಯಥಾಸ್ಥಿತಿ ಕಾಯ್ದುಕೊಂಡರೆ ಈ ಬಾರಿಯೂ ಹಳೆ ತಲೆಗಳ ಮಧ್ಯೆ ಪೈಪೋಟಿ ನಡೆಯುವುದು ಪಕ್ಕಾ.
ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಅಂತಿಮವಾಗಿದ್ದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ರಣತಂತ್ರ ಮುಂದುವರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಕೂಡಾ ಹೊಸ ಬದಲಾವಣೆ ಮಾಡದೇ ಹಳೇ ಅಭ್ಯರ್ಥಿ ಕಣಕ್ಕೆ ಇಳಿಸುವ ಮೂಲಕ ಗೆಲುವಿನ ಕಸರತ್ತು ನಡೆಸಲಿದೆ.
ಈಗಾಗಲೇ ಬಿಜೆಪಿ ಟಿಕೆಟ್ ಬಯಸಿ ಹಲವರು ಹೈಕಮಾಂಡ್ ಬಳಿ ಮನವಿ ಇಟ್ಟಿದ್ದಾರೆ. ಆದರೆ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಚಿಂತನೆ ಕೈಬಿಟ್ಟು, ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಹಾಗೆ ಕಾಣುತ್ತಿದ್ದು, ಸಧ್ಯ ಎಲ್ಲರ ಚಿತ್ತ ಹೈಕಮಾಂಡ್ ಮೇಲೆ ನೆಟ್ಟಿದೆ.