ಕಲುಷಿತ ನೀರು ಸೇವನೆ ಪ್ರಕರಣ: ಮತ್ತೋರ್ವ ಬಲಿ
ಬೆಳಗಾವಿ : ಬೋರ್ ವೆಲ್ ನಿಂದ ಬರುವ ಕಲುಷಿತ ನೀರು ಸೇವಿಸಿ ಓರ್ವ ವ್ಯಕ್ತಿ ಮೃತಪಟ್ಟು 150ಕ್ಕೂ ಅಧಿಕ ಜನ ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ನಡೆದಿತ್ತು
ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. 42 ವರ್ಷದ ವಿಠ್ಠಲ ಹನಮಂತ ಗುಡಿಹಿಂದ(ಮಾದರ) ಮೃತ ವ್ಯಕ್ತಿ. ಈತ ಮೂಲತಃ ಮುಧೋಳ ತಾಲೂಕಿನ ಜಂಬಗಿ ಗ್ರಾಮದವನಿದ್ದು, ಕಳೆದ 20 ವರ್ಷಗಳಿಂದ ಮುದೇನೂರ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ ವಾಸವಾಗಿದ್ದ.
ಕಳೆದ ತಿಂಗಳು 25 ರಂದು ಕಲುಷಿತ ನೀರು ಸೇವನೆಯಿಂದ ಅಸ್ವಸ್ತಗೊಂಡ ಕಾರಣ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಕುಮಾರೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚೇತರಿಕೆ ಕಂಡುಬಂದಿದ್ದರಿಂದ ಕಳೆದ ವಾರ ಡಿಸ್ಚಾರ್ಜ ಮಾಡಲಾಗಿತ್ತು. ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಪುನಃ ಬಾಗಲಕೋಟಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೂ ಸುಧಾರಣೆಯಾಗದ ಕಾರಣ ಶನಿವಾರ ಮಧ್ಯಾಹ್ನ ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪದ್ದಾನೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಮೃತನಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
ಕಲುಷಿತ ನೀರಿಗೆ ಇದು ಎರಡನೆ ಬಲಿಯಾಗಿದೆ.