ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದ್ದು ಪುಡಿ ರೌಡಿ ಒಬ್ಬ ಯುವಕನನ್ನು ಥಳಿಸಿ ಬೆತ್ತಲೆಗೊಳಿಸಿ ವೀಡಿಯೋ ಮಾಡಿಕೊಂಡ‌ ಘಟನೆ ಬೆಳಕಿಗೆ ಬಂದಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಹೌದು ಬೆಂಗಳೂರಿನ ಸುಂಕದಕಟ್ಟೆಯ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಗ್ಯಾಂಗ್ ನಿಂದ ಯುವಕನ ಮೇಲೆ ಹಲ್ಲೆ ನಡೆದಿದ್ದು ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಅಟ್ಟಾಡಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ರೌಡಿಶೀಟರ್ ನಡೆಸಿರುವ ಈ ಹಲ್ಲೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ವೀಡಿಯೋ ಕುರಿತು ಡಿಸಿಪಿ ಎಸ್.ಗಿರೀಶ್ ಹೇಳಿದ್ದೇನು…?

ಅಲ್ಲದೇ, ಹಲ್ಲೆ ಘಟನೆ ನಡೆದ ಕೆಲ ಗಂಟೆಗಳಲ್ಲೇ ರೌಡಿಶೀಟರ್ ಪವನ್ ಮತ್ತೋರ್ವ ವ್ಯಕ್ತಿಯ ಮೇಲೆ​ ಹಲ್ಲೆ ಮಾಡಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಒಂದು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು, ಅರ್ಜುನ್​ ಎಂಬಾತನ ಮೇಲೆ ಪವನ್​ ಹಲ್ಲೆ ನಡೆಸಿದ್ದಾಗಿದೆ.

ಅರ್ಜುನ್​ನನ್ನು ಬೆತ್ತಲೆಗೊಳಿಸಿ, ಹೊಡೆದು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪವನ್​ ಹಾಗೂ ಆತನ ಸ್ನೇಹಿತರ ನಡುವೆಯೇ ಸಮಸ್ಯೆ ಉಂಟಾಗಿ, ಹಳೆಯ ವಿಡಿಯೋ ವೈರಲ್​ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.ಈ ಬಗ್ಗೆ ರೌಡಿಶೀಟರ್​​ ಪವನ್​ಗಾಗಿ ಹುಡುಕಾಟ ನಡೆಯುತ್ತಿದೆ.​

ಹಾಗೂ ವಿಡಿಯೋದಲ್ಲಿ ಹಲ್ಲೆಗೊಳಗಾಗಿರುವ ಅರ್ಜುನ್​ ಕೂಡ ನಾಪತ್ತೆಯಾಗಿದ್ದಾನೆ. ಒಂದು ತಿಂಗಳ ಹಿಂದೆ ಘಟನೆ ನಡೆದರೂ, ಆತ ಕೂಡ ಯಾವುದೇ ದೂರು ನೀಡಿಲ್ಲ. ಇಬ್ಬರೂ ಕೂಡ ಬ್ಯಾಡ್​ ಕ್ಯಾರೆಕ್ಟರ್ಸ್​ ಎಂಬುದು ಗೊತ್ತಾಗಿದೆ.

ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.