ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಸಂಘಟನೆಗಳ ಪ್ರತಿಭಟನೆ
ಬೆಳಗಾವಿ : ಮೇಕೆದಾಟು,ಮಹಾದಾಯಿ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಲಪ್ರಭಾ ನದಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಗೊಳ್ಳಬೇಕು. ಸವದತ್ತಿ ತಾಲೂಕಿನ ನೀರಾವರಿಯಿಂದ ವಂಚಿತವಾದ ಗ್ರಾಮಗಳಿಗೆ ಶಾಶ್ವತ ನೀರಿನ ಯೋಜನೆ ಕಲ್ಪಿಸಿಕೊಡಬೇಕು. ಸತ್ತಿಗೇರಿ ಯೋಜನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ತೆಗೆದುಕೊಂಡ ಯಂತ್ರೋಪಕರಣಗಳ ಸಾಲ ಮತ್ತು ಟ್ರ್ಯಾಕ್ಟರ್ ಸಾಲ ಹಾಗೂ ಜಾನುವಾರುಗಳ, ಬೆಳೆ ಸಾಲ ಸಂಪೂರ್ಣ ಸರಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕದ ಕೃಷ್ಣಾ ನದಿ ಆಲಮಟ್ಟಿ ಜಲಾಶಯದ 512 ರಿಂದ 524 ಅಡಿಗೆ ಎತ್ತರಿಸಲು ತ್ವರಿತ ಕಾಮಗಾರಿಯನ್ನು ಆರಂಭಿಸಬೇಕು. ತುಂಗಭದ್ರ ನದಿಗೆ ನವಲಿ ಬಳಿ ಸಮಾನಾರಿತರ ಜಲಾಶಯ ನಿರ್ಮಿಸುವಂತೆ ಒತ್ತಾಯಿಸಿದರು.
ನೆರೆಯ ಹಾವಳಿಯಿಂದ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಹಾವಳಿಯಿಂದ ಮನೆ ಹಾಗೂ ಬೆಳೆ ನಾಶದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರಕಾರ ಹಿಂಪಡೆದಿರುವ ಕೃಷಿ ಮಸೂದೆ ಕಾಯ್ದೆಯನ್ನು ರಾಜ್ಯ ಸರಕಾರವೂ ಹಿಂಪಡೆಯಬೇಕು ಹಾಗೂ ರಾಯಚೂರು ವಿವಿ ಸ್ಥಾಪನೆ ಸಲುವಾಗಿ ಇಲ್ಲಿನ ಸಣ್ಣ ರೈತರ ಮತ್ತು ಹಿಂದುಳಿದ ಸಮಾಜದವರ ಕೃಷಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡಿದೆ. ಅವರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ರೈತ ಮುಖಂಡರಾದ ಪ್ರಶಾಂತಗೌಡ ಪಾಟೀಲ, ಸವಿತಾ ಮೂಗಯ್ಯನವರ, ಶಾರದಾ, ಜಯಶ್ರೀ, ಗೌಡಪ್ಪಗೌಡ ಪಾಟೀಲ, ಸಂಗಣ್ಣ ಬಾಗೇವಾಡಿ, ಬಸವರಾಜ ಬಿಜ್ಜುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.