ಮಹಾಜನ್ ವರದಿಯೇ ಅಂತಿಮ : ಸಿಎಂ ನಿರ್ಧಾರಕ್ಕೆ ಎಂಇಎಸ್ ತಬ್ಬಿಬ್ಬು
ಬೆಳಗಾವಿ : ಭಾಷಾವಾರು ಪ್ರಾಂತ್ಯ ರಚನೆ ಕುರಿತು ನ್ಯಾ.ಮಹಾಜನ್ ಸಮಿತಿ ನೀಡಿರುವ ವರದಿಯೇ ಅಂತಿಮವಾಗಿದೆ. ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಭಗ್ನಗೊಳಿಸಿ, ಗಡಿ ವಿವಾದದ ಮೂಲಕ ರಾಜಕೀಯ ಲಾಭ ಪಡೆಯುವ ದುರುದ್ದೇಶ ಹೊಂದಿರುವವರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯಲ್ಲಿಂದು ಸಾರ್ವಜನಿಕ ಮಹತ್ವದ ವಿಚಾರದ ಕುರಿತು ಸಭಾಧ್ಯಕ್ಷರ ಅನುಮತಿ ಮೇರೆಗೆ ನಡೆದ ಚರ್ಚೆ ನಂತರ ಸರ್ಕಾರದ ಪರವಾಗಿ ಉತ್ತರಿಸಿ ಮಾತನಾಡಿದರು.
ಭಾಷಾವಾರು ಪ್ರಾಂತ್ಯಗಳ ರಚನೆ ನಂತರ ಗಡಿ ತಂಟೆಗೆ ಮಹಾರಾಷ್ಟ್ರ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಪುನರ್ ವಿಮರ್ಶೆಗೆ ಅವಕಾಶ ಇಲ್ಲದಿದ್ದರೂ ಕೂಡ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ.ನಾಯ್ಕ್ ಅವರು ನ್ಯಾ.ಮಹಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿದರು. ಸಮಿತಿಯು ವಿವಾದಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ನೀಡಿದೆ. ಆ ನಂತರವೂ ಮಹಾರಾಷ್ಟ್ರ ತನ್ನ ಅಪಸ್ವರ ಮುಂದುವರೆಸುತ್ತಿದೆ. ಗಡಿ ವಿವಾದವನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿರುವವರ ಹುನ್ನಾರ ಇದರ ಹಿಂದೆ ಇದೆ. ಕ್ರಿಮಿನಲ್ ಮನೋಭಾವ ಹೊಂದಿರುವ ವ್ಯಕ್ತಿಗಳು ಅಶಾಂತಿ ಮೂಡಿಸುವ ದರುದ್ದೇಶದಿಂದ ಪೂರ್ವ ನಿಯೋಜಿತವಾಗಿ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಖಾನಾಪುರದಲ್ಲಿ ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವರು ಶಿವಾಜಿ ಪ್ರತಿಮೆಗೆ ಮಸಿ ಬಳೆದಿದ್ದಾರೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಪ್ರಕರಣವನ್ನು ಸೀಮಿತಗೊಳಿಸುವುದಿಲ್ಲ. ಈ ಪ್ರಕರಣದ ಸಮಗ್ರ ತನಿಖೆ ಮಾಡಿ ಕೃತ್ಯದ ಹಿಂದಿರುವ ಬಲ, ಸಂಚು, ಷಡ್ಯಂತ್ರ ರೂಪಿಸಿರುವುದು ದೇಶದ್ರೋಹದ ಕೃತ್ಯವಾಗಿದೆ. ಇವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅದೇ ರೀತಿ ವಿಚಾರಣೆ ನಡೆಸಲು ಸೂಚಿಸಲಾಗಿದೆ ಎಂದರು.
ಕರ್ನಾಟಕದಲ್ಲಿರುವ ಮರಾಠಿಗರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಸಾಮರಸ್ಯದಿಂದ ಇದ್ದಾರೆ. ಗಡಿ ವಿವಾದ ಸಮಸ್ಯೆ ಅಲ್ಲ. ಇದು ಗಡಿ ತಂಟೆಯನ್ನೇ ರಾಜಕೀಯ ಮಾಡಿಕೊಂಡಿರುವ ವ್ಯಕ್ತಿಗಳು ಹಾಗೂ ರಾಜಕೀಯ ಸಂಘಟನೆಗಳ ಬಂಡವಾಳವಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ಗಡಿಭಾಗದ ಮರಾಠಿಗರು ಇಲ್ಲಿನ ಅಭಿವೃದ್ಧಿ ಹಾಗೂ ಸರ್ಕಾರದ ಸ್ಪಂದನೆಗೆ ಮೆಚ್ಚಿಕೊಂಡು ರಾಜ್ಯದಲ್ಲಿಯೇ ಮುಂದುವರೆಯಲು ಮನಃಪೂರ್ವಕವಾಗಿ ಒಪ್ಪಿದ್ದಾರೆ. ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಆರ್ಥಿಕ, ವಾಣಿಜ್ಯ, ಕೈಗಾರಿಕೆ ಹಾಗೂ ರಕ್ಷಣಾ ವಲಯದಲ್ಲಿ ಬೆಳಗಾವಿ ಮಹತ್ವದ ಸ್ಥಳವಾಗಿದೆ. ಇಲ್ಲಿ ಗಲಭೆ, ಅಶಾಂತಿ, ಅಸ್ಥಿರತೆ ಸೃಷ್ಟಿಸುವುದು ಖಂಡನೀಯ.
ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ರಾಜಕೀಯ ಅಸ್ತಿತ್ವವನ್ನು ರಾಜ್ಯದಲ್ಲಿ ಕಳೆದುಕೊಂಡಿದೆ. 1978ರಲ್ಲಿ ಮಹಾರಾಷ್ಟ್ರದ ಕೆಲವು ನಾಯಕರು ಬೆಳಗಾವಿಗೆ ಬಂದಾಗ ಗಲಭೆಯಾಗಿತ್ತು. ಆಗ ನಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರ ಮೇಲೆಯೂ ಹಲ್ಲೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಜನತೆ ಎಂಇಎಸ್ ತಿರಸ್ಕರಿಸಿದ್ದಾರೆ ಎಂದರು.
ಮಹಾರಾಷ್ಟ್ರದ ಜತ್ತ ತಾಲೂಕು ತೀವ್ರ ಬರಪೀಡಿತ ಹಾಗೂ ಕನ್ನಡಿಗರು ಅಧಿಕವಾಗಿರುವ ಪ್ರದೇಶವಾಗಿದೆ. ಅಲ್ಲಿನ ಸುಮಾರು 40 ಗ್ರಾಮ ಪಂಚಾಯಿತಿಗಳು ತಮ್ಮನ್ನು ಕರ್ನಾಟಕಕ್ಕೆ ಸೇರಿಸಲು ಹಿಂದೊಮ್ಮೆ ನಿರ್ಣಯ ಕೈಗೊಂಡು ಒತ್ತಾಯ ಪಡಿಸಿದ್ದನ್ನು ಸದನದಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು.
ಎಂಇಎಸ್ ರಾಜಕೀಯ ಪುಂಡರ ಬಗ್ಗೆ ನಾವೆಲ್ಲ ಒಕ್ಕೊರಲಿನಿಂದ ಕಠಿಣ ನಿಲುವು ತಳೆಯಬೇಕು. ಬೆಳಗಾವಿಯ ಸುವರ್ಣಸೌಧ ಕರ್ನಾಟಕದ ಇನ್ನೊಂದು ಶಕ್ತಿ ಕೇಂದ್ರವಾಗಿದೆ. ಸೂರ್ಯ ಚಂದ್ರ ಇರುವವರೆಗೂ ಇದು ಕರ್ನಾಟಕದ ಅವಿಭಾಜ್ಯ ಅಂಗವಾಗಿರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ರಾಜಿ, ಮಾತುಕತೆ ಅಗತ್ಯ ಇಲ್ಲ. ಕರ್ನಾಟಕದ ಒಂದಿಂಚೂ ಗಡಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಘಟನೆ ಕುರಿತು ಅಲ್ಲಿನ ಗೃಹ ಕಾರ್ಯದರ್ಶಿಗಳೊಂದಿಗೆ ನಮ್ಮ ರಾಜ್ಯದ ಗೃಹ ಕಾರ್ಯದರ್ಶಿಗಳು ಹಾಗೂ ಅಲ್ಲಿನ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ನಮ್ಮ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮಾತನಾಡಿ, ಕನ್ನಡಿಗರ ರಕ್ಷಣೆಯ ಹೊಣೆ ಕುರಿತು ಚರ್ಚಿಸಿದ್ದಾರೆ. ನಾನು ಕೂಡ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲಿ ಪ್ರತಿಮೆಗಳನ್ನು ಭಗ್ನಗೊಳಿಸಿದ, ಅವಮಾನಿಸಿದ ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಆರೋಪಿಗಳ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು. ಎರಡೂ ರಾಜ್ಯಗಳ ಜನತೆಯ ಮಧ್ಯೆ ವಿಶ್ವಾಸದ ಕೊರತೆಯಿಲ್ಲ. ಕೆಲವು ಪುಂಡರು ಗಡಿ ವಿಚಾರದಲ್ಲಿ ಶಾಂತಿ ಕದಡುವ ಮೂಲಕ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದ ಮೇಲೆ ಪ್ರಭಾವ ಬೀರುವ ಭ್ರಮೆಯಲ್ಲಿ ಇದ್ದಾರೆ. ಅದು ಈಡೇರುವುದಿಲ್ಲ. ಶಾಶ್ವತ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಸದನದ ಭಾವನೆಯಾಗಿದೆ ಎಂದರು.
ನೆಲ ಜಲದ ಹಿತಾಸಕ್ತಿಗೆ ಈ ಹಿಂದಿನ ಎಲ್ಲಾ ಸರ್ಕಾರಗಳು ನಿರಂತರವಾಗಿ ಕೆಲಸ ಮಾಡಿವೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಎಂಇಎಸ್ ನಿಷೇಧಕ್ಕೆ ಪ್ರತಿಪಕ್ಷಗಳ ಸದಸ್ಯರು ಸಲಹೆ ನೀಡಿದ್ದಾರೆ. ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಒತ್ತಡಕ್ಕೆ ಮಣಿಯದೇ ಕನ್ನಡದ ಗಡಿಗಳ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು. ಮಹಾರಾಷ್ಟ್ರ ಕನ್ನಡ ಶಾಲೆಗಳ ಅಭಿವೃದ್ಧಿ ಕುರಿತು ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಸದನಕ್ಕೆ ವಿವರಿಸಿದರು.
ಮಹಾಜನ್ ವರದಿಯೇ ಅಂತಿಮ : ಪ್ರತಿಮೆಗಳನ್ನು ಅವಮಾನಿಸಿದರ ವಿರುದ್ದ ದೇಶದ್ರೋಹ ಪ್ರಕರಣ ವಿಧಾನ ಸಭೆಯಲ್ಲಿ ಒಮ್ಮತದ ನಿರ್ಣಯ
ಗಡಿ ವಿವಾದ ಕುರಿತು ನ್ಯಾ.ಮಹಾಜನ್ ಆಯೋಗ ನೀಡಿರುವ ವರದಿಯೇ ಅಂತಿಮ ಎಂದು ರಾಜ್ಯ ಈಗಾಗಲೇ ಒಪ್ಪಿಕೊಂಡಿದೆ. ಆದಾಗ್ಯೂ ಕೆಲವು ವ್ಯಕ್ತಿ, ಸಂಘಟನೆಗಳು ಆಗಿಂದಾಗ್ಗೆ ಇದನ್ನು ಕೆದಕಿ ಶಾಂತಿ ಕದಡುತ್ತಿವೆ. ಶಿವಾಜಿ, ರಾಯಣ್ಣ ಪ್ರತಿಮೆಗಳು ಹಾಗೂ ಬಸವಣ್ಣ ಭಾವಚಿತ್ರಕ್ಕೆ ಆಗಿರುವ ಅವಮಾನದ ಘಟನೆಯನ್ನು ಸದನ ಖಂಡಿಸುತ್ತದೆ. ಇದಕ್ಕೆ ಕಾರಣವಾದವರ ವಿರುದ್ಧ ದೇಶದ್ರೋಹ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೇಂದ್ರ ಗೃಹ ಮಂತ್ರಾಲಯಕ್ಕೆ ಕಳಿಸಲಾಗುವುದು. ಎರಡೂ ರಾಜ್ಯಗಳಲ್ಲಿ ಸಾಮರಸ್ಯ ಬಯಸುತ್ತೇವೆ. ಗಡಿಯಿಂದ ಆಚೆ ಪುಂಡಾಟಿಕೆ ನಿಲ್ಲಿಸಲು ಸದನ ಕೈಗೊಂಡ ನಿರ್ಣಯವನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಬೆಂಬಲಿಸಿದರು.