
ನಾಳೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ
ಪ್ರತಿಜ್ಞಾ ಪಂಚಾಯತ್ ಬೃಹತ್ ಸಮಾವೇಶ

ಅಕ್ಟೋಬರ್ 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಧರಣಿ ಸತ್ಯಾಗ್ರಹ.
ಯತ್ನಾಳ್ & ಬೆಲ್ಲದ್ ಗೆ ಅಭಿನಂದನೆ : ಜಯಮೃತ್ಯುಂಜಯ ಶ್ರೀ
ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ತಪ್ಪಿಸಲಾಗಿದೆ
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2 A ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಕೊನೆಯ ಘಟ್ಟ ತಲುಪಿದ್ದು ನಾಳೆ. ಸೆಪ್ಟೆಂಬರ್ – 24 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಜ್ಞಾ ಪಂಚಾಯತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಜಿಲ್ಲೆಯ ಎಲ್ಲಾ ಪಂಚಮಸಾಲಿ ಸಮುದಾಯದ ಬಾಂಧವರು ಸೇರಿ ನಾಳೆ ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಈಗಾಗಲೇ ರಾಜ್ಯದ 26 ಜಿಲ್ಲೆಗಳಲ್ಲಿ 2A ಮೀಸಲಾತಿ ಹೋರಾಟದ ಕುರಿತಾಗಿ ಸಭೆ ನಡೆಸಿದ್ದು ಬರುವ ಅಕ್ಟೊಬರ್ 1 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಕುರಿತು ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.
ಸರ್ಕಾರದ ಗಡುವು ಮುಕ್ತಾಯವಾಗಿದೆ : ಈ ಹಿಂದೆ ಕೈಗೊಂಡಿದ್ದ 2-A ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಸರ್ಕಾರ ಕಾಲಾವಕಾಶ ಕೇಳಿತ್ತು ಈಗ ಆ ಗಡುವು ಮುಕ್ತಾಯವಾಗಿದೆ. ಕೂಡಲೇ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಹೋರಾಟ ಮುಂದುವರಿಯುತ್ತದೆ ಎಂದರು.
ಅಕ್ಟೋಬರ್ 1 ರಂದು ಫ್ರೀಡಂ ಪಾರ್ಕನಲ್ಲಿ ಧರಣಿ ಸತ್ಯಾಗ್ರಹ : ಒಂದುವೇಳೆ ಸರ್ಕಾರ ಮೀಸಲಾತಿ ಪ್ರಕಟ ಮಾಡದಿದ್ದರೆ ಅಕ್ಟೋಬರ್ 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು. ಈ ಕುರಿತು ಸಮುದಾಯದ ಮುಖಂಡರ ಜೊತೆಗೆ ಚರ್ಚಿಸಲಾಗುತ್ತದೆ ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದರು.
ಯತ್ನಾಳ್ & ಬೆಲ್ಲದ್ ಗೆ ಅಭಿನಂದನೆ : ಪಂಚಮಸಾಲಿ ಸಮುದಾಯಕ್ಕೆ 2 – A ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಇಂದು ನಡೆದ ವಿಧಾನಮಂಡಳ ಅಧಿವೇಶನದಲ್ಲಿ ಸರ್ಕಾರಕ್ಕೆ ಇಬ್ಬರೂ ಶಾಸಕರು ಪ್ರಶ್ನೆ ಮಾಡಿದ್ದು ನಮಗೆ ಮತ್ತಷ್ಟು ಬಲ ಬಂದಂತಾಗಿದೆ. ಆಡಳಿತ ಪಕ್ಷದ ಸದಸ್ಯರಾಗಿದ್ದರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರುವ ಇವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಜೊತೆಗೆ ನಾಳೆ ಬೆಳಗಾವಿಯಲ್ಲಿ ನಡೆಯುವ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಜಯಮೃತ್ಯುಂಜಯ ಶ್ರೀ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ತಪ್ಪಿಸಲಾಗಿದೆ : ಪಂಚಮಸಾಲಿ ಸಮುದಾಯದ ಶಾಸಕರಿಗೆ ಸಿಎಂ ಸ್ಥಾನ ಕಲ್ಪಿಸುಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ನಿರಾಣಿ ಹಾಗೂ ಅರವಿಂದ ಬೆಲ್ಲದ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಂಭವ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಬೇರೆಯವರಿಗೆ ಅವಕಾಶ ಕಲ್ಪಿಸಿ ನಮ್ಮವರಿಗೆ ಸಿಎಂ ಸ್ಥಾನ ತಪ್ಪಿಸಲಾಯಿತು. ಆದರೆ ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಿದ್ದು ಸಂತೋಷ ಉಂಟುಮಾಡಿದೆ ಎಂದು ಶ್ರೀಗಳು ಹೇಳಿದರು.