
ಹೆಬ್ಬಾಳಕರ್ ದೂರು ; ಸಿ.ಟಿ ರವಿಗೆ ಸಂಕಷ್ಟ ಗ್ಯಾರಂಟಿ…?

ಬೆಳಗಾವಿ : ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಆಡಿದ್ದ ಆ ಒಂದು ಮಾತು ಸಿ.ಟಿ ರವಿಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಒಂದು ಕಡೆ ಸಿಒಡಿ ತನಿಖೆ ನಡೆಯುತ್ತಿದ್ದರೆ, ಈ ಮಧ್ಯೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮತ್ತೊಂದು ದೂರು ನೀಡಿದ್ದಾರೆ.
ಈಗಾಗಲೇ ಹೊರಟ್ಟಿಗೆ ದೂರು ದಾಖಲಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ವಿರುದ್ಧ ಆಡಿರುವ ಅಶ್ಲೀಲ ಮಾತು ರೆಕಾರ್ಡ್ ಆಗಿದ್ದ ವೀಡಿಯೋ ಸಾಕ್ಷಿ ನೀಡಿದ್ದಾರೆ. ಪ್ರಕರಣ ಕುರಿತು ಸೋಮವಾರ ತನಿಖೆ ಕೈಗೊಳ್ಳಲಿರುವ ಸಭಾಪತಿ ಹೊರಟ್ಟಿ ಅವರು ವೀಡಿಯೋ ಸಾಕ್ಷಿಯನ್ನು ಎಫ್ಎಸ್ಎಲ್ ಗೆ ಕಳುಹಿಸುವ ನಿರ್ಧಾರ ಮಾಡಲಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೋ ಸಾಕ್ಷಿ ಯನ್ನು ಸಭಾಪತಿ ಹೊರಟ್ಟಿ ತನಿಖೆಯ ಭಾಗವಾಗಿ ಪಡೆದುಕೊಂಡರೆ, ಇದರಲ್ಲಿ ಹೆಬ್ಬಾಳಕರ್ ವಿರುದ್ಧ ಸಿ.ಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದು ಸ್ಪಷ್ಟವಾಗಿ ಇದ್ದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟರೆ ಪ್ರಕರಣ ಸಿ.ಟಿ ರವಿಗೆ ಉರುಳಾಗುವ ಸಾಧ್ಯತೆ ಹೆಚ್ಚು.
ಈ ಕುರಿತು ಶನಿವಾರ ಸಂಜೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಒಬ್ಬ ಹೆಣ್ಣುಮಗಳು. ಯಾವುದೇ ಹೆಣ್ಣುಮಗಳು ಇಂತಹ ಪ್ರಕರಣದಲ್ಲಿ ತನ್ನ ವಿರುದ್ಧ ಮಾತನಾಡದೆ ಆರೋಪ ಮಾಡುವುದಿಲ್ಲ.
ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ಹೆಬ್ಬಾಳಕರ್ ಮರ್ಯಾದೆ ವಿಷಯಕ್ಕೆ ನಾವು ಜವಾಬ್ದಾರಿ ಆಗುತ್ತೇವೆ. ಇಡೀ ದೇಶಕ್ಕೆ ಈ ವಿಷಯ ಹೋಗಿದ್ದು ಬಹಳ ಎಚ್ಚರಿಕೆಯಿಂದ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.