Select Page

Advertisement

ಕುವೆಂಪು ಜನ್ಮದಿನ: ವಿಶ್ವ ಮಾನವ ದಿನ ಆಚರಣೆ

ಕುವೆಂಪು ಜನ್ಮದಿನ: ವಿಶ್ವ ಮಾನವ ದಿನ ಆಚರಣೆ

ಬೆಳಗಾವಿ : ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಕುವೆಂಪು ರಚಿಸಿದ ಕಾವ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಶಂಕರಪ್ಪ ವನಕಿಹಾಳ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬಸವರಾಜ ಕಟ್ಟೀಮನಿ ಸಭಾ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಬುಧವಾರ (ಡಿ.29) ಏರ್ಪಡಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಮನುಷ್ಯನಿಗೆ ಹೃದಯವಂತಿಕೆ ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎಂಬುದನ್ನು ತಮ್ಮ ಕಾವ್ಯಗಳ ಮೂಲಕ ರಾಷ್ಟ್ರಕವಿ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದರು.

ಈ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕುವೆಂಪು ಅವರ ಪುಸ್ತಕಗಳನ್ನು ಅಧ್ಯಯನ ಮಾಡುವುದು ಯುವಪೀಳಿಗೆಗೆ ಅತ್ಯವಶ್ಯಕವಾಗಿದೆ. ಕುವೆಂಪು ಅವರ ವೈಚಾರಿಕತೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸಾಧನೆ ಅನನ್ಯವಾದುದು ಎಂದು ಅಪರ ಜಿಲ್ಲಾಧಿಕಾರಿ ವನಕಿಹಾಳ ಹೇಳಿದರು.

ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ಅವರು  ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಶ್ರೀ ರಾಮಾಯಣ ದರ್ಶನಂ  ಮಹಾಕಾವ್ಯ ರಚಿಸಿ, ರಾಜ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ.

ರಾಷ್ಟ್ರ ಕವಿ ಕುವೆಂಪು ಅವರಿಗೆ ಯುಗದ ಕವಿ ಹಾಗೂ ಜಗದ ಕವಿ ಎಂಬ ಬಿರುದುಗಳಿವೆ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ವಿಭಿನ್ನ ಆಯಾಮಗಳ ಮೂಲಕ ವಿಶ್ವ ಮಾನವ ಸಂದೇಶ ವಿಶ್ವಕ್ಕೆ ಪರಿಚಯಿಸಿದ ಮೊದಲ ಯುಗದ ಕವಿ ಕುವೆಂಪು ಅವರು ಎಂದು  ಹೇಳಿದರು.

ಜಾತಿ ಮತಗಳನ್ನು ಬಹಿಷ್ಕರಿಸುವ ಬಸವ, ಬುದ್ಧ, ಅಂಬೇಡ್ಕರ ಅವರ ವಿಚಾರಗಳನ್ನು ಹೊಸ ರೂಪವಾಗಿ ಕುವೆಂಪು ಅವರು ನಾಡಿಗೆ ಪರಿಚಯಿಸಿದ್ದಾರೆ ಎಂದು ಕುವೆಂಪು ಅವರ ಕೃತಿ, ಕಾವ್ಯ ಹಾಗೂ ಅವರ ಸಾಧನೆಯ ಕುರಿತು ಬಟ್ಟಲ ಅವರು ಉಪನ್ಯಾಸ ನೀಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಂಜಯ ಬೆಳಗಾಂವಕರ ಉಪಸ್ಥಿತರಿದ್ದರು. ಬೆಳಗಾವಿಯ ಕೆ.ಎಲ್.ಈ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಸ್ವಾಗತ ಕೋರಿದರು, ಜಮಾದಾರ್ ಅವರು ನಿರೂಪಿಸಿ, ವಂದಿಸಿದರು

ಸಾಂಸ್ಕೃತಿಕ ಕಾರ್ಯಕ್ರಮಗಳು : ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಲಾಗಿತ್ತು. ಸುನೀತಾ ದೇಸಾಯಿ ಹಾಗೂ ತಂಡದವರು ಕುವೆಂಪು ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರೇಮಾ ಉಪಾಧ್ಯೆ ಮತ್ತು ಮಹೇಶ ಕಾಂಬಳೆ ತಂಡದವರು ಭಾಗವಹಿಸಿದ್ದರು.

Advertisement

Leave a reply

Your email address will not be published. Required fields are marked *