Video : ನೀರಿನ ಸಮಸ್ಯೆ ಬಗೆಹರಿಯೊವರೆಗೂ ಹನಿಮೂನ್ ಹೋಗಲ್ಲ ಎಂದ ದಂಪತಿ
ಕೊಲ್ಲಾಪುರ : ಕೊಲ್ಲಾಪುರ ಮಹಾನಗರ ಪಾಲಿಕೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಬೇಸತ್ತು ನೂತನ ವಧು ವರ ಮಾವ ಕೊಟ್ಟ ನೀರಿನ ಟ್ಯಾಂಕರ್ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸಿರುವ ವೀಡಿಯೋ ವೈರಲ್ ಆಗಿದೆ.
ಕಳೆದ ಕೆಲವು ದಿನಗಳ ಹಿಂದೆ ಮದುವೆಯಾದ ವಿಶಾಲ್ ಹಾಗೂ ಅಪರ್ಣಾ ಎಂಬ ನವ ದಂಪತಿಗಳು ಕೊಲ್ಲಾಪುರದ ಮಂಗಳವಾರ ಪೇಟೆಯಲ್ಲಿನ ನೀರಿನ ಸಮಸ್ಯೆ ವಿರೋಧಿಸಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ನೀರಿನ ಸಮಸ್ಯೆಗೆ ಬೇಸತ್ತ ವರ ವಿಶಾಲ್ ಮಾವನಿಗೆ ಮದುವೆ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಕೊಡಲು ಬೇಡಿಕೆ ಇಟ್ಟಿದ್ದ. ಇದಕ್ಕೆ ಸ್ಪಂದಿಸಿದ್ದ ಮಾವ ಮಗಳ ಮದುವೆ ದಿನ ನೀರಿನ ಟ್ಯಾಂಕ್ ಉಡುಗೊರೆಯಾಗಿ ನೀಡಿದ್ದರು.
ಮಾವ ಕೊಟ್ಟ ನೀರಿನ ಟ್ಯಾಂಕ್ ಮೇಲೆ, ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್‌ಗೆ ಹೋಗಲ್ಲ ಎಂದು ಬರಹ ಹಾಕುವ ಮೂಲಕ ನವ ದಂಪತಿಗಳು ಮೆರವಣಿಗೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಟ್ರಾಕ್ಟರ್ ಮೇಲೆ ಖಾಲಿ ಕೊಡಗಳನ್ನು ಕಟ್ಟಿ ಯುವತಿಯರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಒಟ್ಟಿನಲ್ಲಿ ನೀರಿನ ಸಮಸ್ಯೆಗೆ ಬೇಸತ್ತ ವಿಶಾಲ್ ಕೊಲ್ಲಾಪುರ ಮಹಾನಗರ ಪಾಲಿಕೆ ವಿರುದ್ಧ ನಡೆಸಿದ ವಿನೂತನ ಪ್ರತಿಭಟನೆ ವೀಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.