ಮೊಸಳೆ ಪ್ರತ್ಯಕ್ಷ ; ಕಂಗಾಲಾದ ಜನ
ಬೈಲಹೊಂಗಲ : ಸಮೀಪದ ಹೊಸೂರ ಗ್ರಾಮದ ಸಮೀಪ ರೈತ ನಾಗಪ್ಪ ಯಲ್ಲಪ್ಪ ಸತ್ತಿಗೇರಿ ಅವರ ಹೊಲದ ಬಳಿಯ ಬಾವಿಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿರುವುದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಬೆಳಗಿನ ವೇಳೆ ಹೊಲಕ್ಕೆ ತೆರಳಿದ್ದ ರೈತರು ಬಾವಿಯೊಳಗೆ ಚಲನವಲನ ಗಮನಿಸಿ ಪರಿಶೀಲನೆ ನಡೆಸಿದಾಗ ಮೊಸಳೆಗಳು ಇರುವುದನ್ನು ಕಂಡು ಆತಂಕಗೊಂಡರು. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಹರಡಿದ್ದು, ಹಲವರು ಸ್ಥಳಕ್ಕೆ ಧಾವಿಸಿ ದೃಶ್ಯ ವೀಕ್ಷಿಸಿದರು.
ಬಾವಿಯಲ್ಲಿ ನೀರು ಇರುವ ಕಾರಣ ಮೊಸಳೆಗಳು ಅಲ್ಲಿ ನೆಲೆಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ದೈನಂದಿನ ಕೃಷಿ ಚಟುವಟಿಕೆಗಳಿಗೂ ಅಂಜುವ ಪರಿಸ್ಥಿತಿ ಉಂಟಾಗಿದೆ.
ಘಟನೆಯ ಮಾಹಿತಿ ಅರಣ್ಯ ಇಲಾಖೆಗೆ ನೀಡಲಾಗಿದ್ದು, ತಕ್ಷಣವೇ ಕ್ರಮ ಕೈಗೊಂಡು ಮೊಸಳೆಗಳನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಸಾಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.


