ಮಳೆಗೆ ಕುಸಿದ ಕಿತ್ತೂರು ಸಂಸ್ಥಾನದ ವೀಕ್ಷಣಾ ಗೋಪುರ
ಚನ್ನಮ್ಮನ ಕಿತ್ತೂರು : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಿತ್ತೂರು ಸಂಸ್ಥಾನಕ್ಕೆ ಸೇರಿದ್ದ ಐತಿಹಾಸಿಕ ಗಡಾದ ಮರಡಿಯ ಮೇಲಿನ ವೀಕ್ಷಣಾ ಗೋಪುರ ಕುಸಿದು ಬಿದ್ದಿದೆ.
ರಾಣಿ ಚನ್ನಮ್ಮ ಸಂಸ್ಥಾನದ ಕಾಲದ ವೀಕ್ಷಣಾ ಗೋಪುರದ ಮೇಲೆ ಜನವರಿ 26 ಹಾಗೂ ಅಗಸ್ಟ್ 15 ರಂದು ಬೃಹತ್ ತ್ರಿವರ್ಣ ಧ್ವಜ ಹಾರಿಸಲಾಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ವೀಕ್ಷಣಾ ಗೋಪುರ ಮಳೆಯ ಆರ್ಭಟಕ್ಕೆ ಸಿಲುಕಿ ಕುಸಿದು ಬಿದ್ದಿದೆ.
ಕಿತ್ತೂರು ಸಂಸ್ಥಾನದ ಆಡಳಿತಾವಧಿ ಸಂದರ್ಭದಲ್ಲಿ ಕೋಟೆಗೆ ವಿರೋಧಿಗಳ ನುಸುಳುವಿಕೆ ಮೇಲೆ ನಿಗಾವಹಿಸಲು ಪಟ್ಟಣದ ಗಡಾದ ಮರಡಿಯ ಮೇಲೆ ವೀಕ್ಷಣಾ ಗೋಪುರ ನಿರ್ಮಿಸಲಾಗಿತ್ತು. ಈ ಗೋಪುರ ಅಭಿವೃದ್ಧಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1 ಕೋಟಿ 80 ಲಕ್ಷ ಅನುದಾನ ನೀಡಲಾಗಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿ ಕೊನೆಗೆ ವೀಕ್ಷಣಾ ಗೋಪುರವೇ ಕುಸಿದಿದೆ.
ಕಳೆದ ಒಂದು ವಾರದಿಂದ ನಿರಂತರ ಮಳೆಯಾದ ಹಿನ್ನಲೆ ಅಭಿವೃದ್ಧಿ ಪಡಿಸಲಾಗಿದ್ದ ವಾಚ್ ಟವರ್ ಮೇಲ್ಛಾವಣಿ ಮೇಲೆ ಮಳೆ ನೀರು ಸಂಗ್ರಹವಾಗಿದೆ. ನೀರು ಹೊರಗಡೆ ಹೋಗಲು ಸರಿಯಾದ ಸ್ಥಳ ಇಲ್ಲದ ಕಾರಣ ವಾಚ್ ಟವರ್ ಕುಸಿದಿದೆ. 1 ಕೋಟಿ 80 ಲಕ್ಷದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಉದ್ಘಾಟನೆ ಆಗುವ ಮುನ್ನ ಮಳೆರಾಯನ ಆರ್ಭಟಕ್ಕೆ ಕುಸಿದು ಬಿಡಿದ್ದು ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಅನುಮಾನ ಹೊರ ಹಾಕಿದ್ದಾರೆ.
ಹಣ ಬಿಡುಗಡೆ ಮಾಡದ ಅಧಿಕಾರಿಗಳು : ಕಾಮಗಾರಿ ಪ್ರಾರಂಭವಾದ ಬಳಿಕ ಸರಿಯಾದ ಸಮಯಕ್ಕೆ ಕಿತ್ತೂರು ಪ್ರಾಧಿಕಾರದ ಅಧಿಕಾರಿಗಳು ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಿಲ್ಲ. 90 ಲಕ್ಷ ಹಣವನ್ನು ಬಾಕಿ ಇರುವುದರಿಂದ ಕಾಮಗಾರಿ ಮುಗಿಸಲು ಹಣ ಕೊರತೆ ಆಗಿದೆ. ಇದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.