
ಕೊಲ್ಹಾಪುರದಲ್ಲಿ ಮಳೆ ಅಬ್ಬರ ; ನದಿಯಂತಾದ ನಗರ

ಬೆಳಗಾವಿ : ಮಹಾರಾಷ್ಟ್ರದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು ಕಳೆದ ಒಂದು ವಾರದಿಂದ ಬಿಟ್ಟು, ಬಿಡದೆ ಮಳೆ ಸುರಿಯುತ್ತಿದೆ. ಈ ಮಧ್ಯೆ ಕೊಲ್ಲಾಪುರದಲ್ಲಿ ಮಳೆ ಮುಂದುವರಿದಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ನಿರಂತರ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು ಕೊಲ್ಹಾಪುರ ನಗರ ಪ್ರದೇಶದಲ್ಲಿ ಎಲ್ಲಿ ನೋಡಿದರು ಮಳೆ ನೀರು ಆವರಿಸಿದೆ. ರಾಜಾರಾಂ ಆಣೆಕಟ್ಟಿನ ಪಂಚಗಂಗಾ ನದಿ ನೀರಿನ ಮಟ್ಟ 43 ಅಡಿಗೆ ಏರಿಕೆಯಾಗಿದೆ.
ಇನ್ನೂ ರಾಧಾನಗರಿ ಆಣೆಕಟ್ಟಿನ ಸ್ವಯಂ ಚಾಲಿತ ಗೇಟುಗಳು ತೆರೆಯುವ ಹಂತದಲ್ಲಿದೆ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಜಿಲ್ಲಾಡಳಿತ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 81 ಅಣೆಕಟ್ಟುಗಳು ಜಲಾವೃತವಾಗಿವೆ. ಚಿಖಲಿ ಮತ್ತು ಅಂಬೇವಾಡಿ ಗ್ರಾಮಗಳು ಭಾಗಶಃ ಸಂಪರ್ಕ ಕಡಿತಗೊಂಡಿವೆ. ಜಿಲ್ಲಾಡಳಿತದಿಂದ ಎನ್‌ಡಿಆರ್‌ಎಫ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪಡೆಯ ತುಕಡಿಯನ್ನು ಸಿದ್ಧಪಡಿಸಿದೆ.
ಕೊಲ್ಹಾಪುರ ನಗರದಲ್ಲಿ ಮಳೆ ಮುಂದುವರಿದ ಪರಿಣಾಮ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಲಕ್ಷಣ ಇದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಕೆಲ ಗ್ರಾಮಗಳು ಮುಳುಗಡೆ ಹಂತದಲ್ಲಿವೆ.