
ಅಪ್ಪ-ಮಕ್ಕಳು, ಅಣ್ತಮ್ಮಂದಿರಿಗೆ ಟಿಕೆಟ್ ಸಿಗಲ್ಲ: ಯತ್ನಾಳ್

ಬೆಳಗಾವಿ: ಈ ಬಾರಿ ಕರ್ನಾಟಕದಲ್ಲಿ ಬಹಳಷ್ಟು ಬದಲಾವಣೆ ಮಾಡುತ್ತಾರೆ. ಯಾರ ಮೇಲೆ ಆರೋಪಗಳಿವೆ ಅಂತಹವರಿಗೆ ಟಿಕೆಟ್ ನೀಡಲ್ಲ. ಒಂದೇ ಕುಟುಂಬದಲ್ಲಿ ಎರಡ್ಮೂರು ಟಿಕೆಟ್ಗಳು ಸಿಗುವುದಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದರು.
ಸೋಮವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಸಾರಿ ಗುಜರಾತ್ ಮಾದರಿಯಲ್ಲೇ ಚುನಾವಣೆ ಮಾಡಲಿದ್ದು, ಬಹಳಷ್ಟು ಬದಲಾವಣೆ ಮಾಡ್ತಾರೆ. ಒಂದೇ ಕುಟುಂಬದಲ್ಲಿ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ. ಅಪ್ಪ-ಮಕ್ಕಳು, ಅಣ್ಣ-ತಮ್ಮರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ ಎಂದು ಹೇಳಿದರು.
ರಾಜ್ಯ ಬಿಜೆಪಿಗೆ ಸಮೀಕ್ಷೆಯಲ್ಲಿ ಹಿನ್ನಡೆ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಗುಜರಾತ್, ಯುಪಿಯಲ್ಲೂ ಹಾಗೆ ಹೇಳಿದ್ದರು ಆದರೆ ಬಿಜೆಪಿ ಬಂತು. ಕರ್ನಾಟಕದಲ್ಲಿ ನರೇಂದ್ರ ಮೋದಿಯವರು ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ & ಬಿಎಸ್ವೈ ಕ್ಷೇತ್ರ ಸಂಚಾರ ಮಾಡಬೇಕು ಎಂದು ಹೇಳುವ ಮೂಲಕ ಇದೇ ಮೊದಲ ಬಾರಿಗೆ ಬಿಎಸ್ವೈ ವಿಚಾರದಲ್ಲಿ ಸಾಫ್ಟ್ ಕಾರ್ನರ್ ತೋರಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಬಗ್ಗೆ ಮಾತನಾಡಿರುವ ಅವರು, ನಮ್ಮ ಸಮುದಾಯದ ನಾಯಕರು ಪ್ರತಿಯೊಂದು ಪಕ್ಷದಲ್ಲಿ ಇದ್ದಾರೆ, ಡಿಸೆಂಬರ್ 19 ರ ಅಂತಿಮ ಗಡುವಿನೊಳಗಾಗಿ ಮೀಸಲಾತಿ ಕೊಡಿಸುತ್ತಾರೆ ಎಂದರು.