ಅಥಣಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ – ಸಾಹುಕಾರ್ ಸಿಟ್ಟಿಗೆ ಕಾರಣವಾಯ್ತಾ ಶಾಸಕರ ನಡೆ
ಅಥಣಿ : ಮಾಜಿ ಡಿಸಿಎಂ ಲಕ್ಷಣ ಸವದಿ ಪ್ರತಿನಿಧಿಸುವ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಲಕ್ಷಣ ಸವದಿ ಬೆಂಬಲಿಗರ ಮಧ್ಯೆ ಶೀತಲ ಸಮರ ಏರ್ಪಟ್ಟಿದ್ದು ಮುಂದೆ ಯಾವೆಲ್ಲ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.
ಹೌದು ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಅಥಣಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡುವುದರಲ್ಲಿ ಅನುಮಾನವಿಲ್ಲ. ಲಕ್ಷಣ ಸವದಿ ಬೆಂಬಲಿತ ಮೂಲ ಬಿಜೆಪಿ ಕಾರ್ಯಕರ್ತರಿದ್ದ ಅಥಣಿ ಮಂಡಲ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಕುಮಠಳ್ಳಿ ಬೆಂಬಲಿತ ಅಭ್ಯರ್ಥಿ ಆಯ್ಕೆ ಮಾಡಿದ್ದರ ಪರಿಣಾಮ ಇಷ್ಟೇಲ್ಲಾ ಬೆಳವಣಿಗೆಗೆ ಕಾರಣವಾಗಿದೆ.
ಏನದು ಘಟನೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಣ್ಣಾಸಾಹೇಬ್ ನಾಯಿಕ್ ಅವರು ಈ ಹಿಂದೆ ಅಥಣಿ ಮಂಡಳ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಅಚಾನಕ್ಕಾಗಿ ಅವರನ್ನು ಆ ಸ್ಥಾನದಿಂದ ಬದಲಾವಣೆ ಮಾಡಿ ಶಾಸಕ ಮಹೇಶ್ ಕುಮಠಳ್ಳಿ ಆಪ್ತ ಡಾ. ರವಿ ಸಂಕ ಅವರನ್ನು ನೇಮಕ ಮಾಡಲಾಗಿದೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮೂಲ ಬಿಜೆಪಿಗರ ಬಣ, ಮಂಡಳ ಸದಸ್ಯದ ಸಭೆ ಕರೆದು ಯಾವುದೇ ಬದಲಾವಣೆ ಇಲ್ಲ ಮಂಡಲ ಅಧ್ಯಕ್ಷರಾಗಿ ನಾನೇ ಮುಂದುವರಿದಿರುತ್ತೇನೆ ಎಂದು ಅಣ್ಣಾಸಾಹೇಬ್ ನಾಯಿಕ್ ಹೇಳಿಕೊಂಡಿದ್ದರು. ಇದಕ್ಕೆ ಧ್ವನಿಗೂಡಿಸಿದ ಮೂಲ ಬಿಜೆಪಿ ಕಾರ್ಯಕರ್ತರು ಚಿಕ್ಕೋಡಿ ಜಿಲ್ಲಾಧ್ಯಕ್ಷರ ನಡೆಗೆ ಆಕ್ರೋಶ ಹೊರಹಾಕಿದ್ದರು.
ಇನ್ನೇನು ಮೂರು ತಿಂಗಳ ಒಳಗೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ಒಳಜಗಳದ ಲಾಭ ಪಡೆಯಲು ಕಾಂಗ್ರೆಸ್ ಇತ್ಸುಕವಾಗಿದ್ದು ಸುಳ್ಳಲ್ಲ. ಇದೇ ಲೆಕ್ಕಾಚಾರ ಒಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಲಾಭ ಪಡೆಯುವ ಯತ್ನ ನಡೆಯುತ್ತಿರುವುದು ಸಧ್ಯದ ಅಥಣಿ ರಾಜಕಾರಣ.