ಗೋಕಾಕ್ ಉದ್ಯಮಿ ಕೊಲೆ ಪ್ರಕರಣ : ಮುಂದುವರಿದ ಶೋಧ ಕಾರ್ಯ
ಗೋಕಾಕ್ : ಕೋಟ್ಯಾಂತರ ರೂ ಸಾಲ ಕೊಟ್ಟಿದ್ದ ಉದ್ಯಮಿ ತನ್ನ ಹಣ ವಾಪಸ್ ಕೇಳಿದ್ದಕ್ಕೆ ವೈದ್ಯನೋರ್ವ ಕೊಲೆ ಮಾಡಿದ್ದು ಉದ್ಯಮಿ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.
ಗೋಕಾಕ್ ಪಟ್ಟಣದ ಉದ್ಯಮಿ ರಾಜು ಝಂವರ್ ಎಂಬುವವರು ಕೋಟ್ಯಾಂತರ ರೂ ಸಾಲವನ್ನು ವೈದ್ಯ ಸಚಿನ್ ಶಿರಗಾಂವಿ ಎಂಬುವವರಿಗೆ ನೀಡಿದ್ದರು. ನಂತರ ತಮ್ಮ ಹಣ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ಭೀಕರವಾಗಿ ಕೊಲೆಗೈದು ಮೃತದೇಹವನ್ನು ನದಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ ಉದ್ಯಮಿ ರಾಜು ಝಂವರ್ ಎಂಬುವರನ್ನು ಆರೋಪಿ ವೈದ್ಯ ಸಚಿನ್ ಶಿರಗಾಂವಿ ಹಾಗೂ ಸಹಚರರು ಮಾರ್ಕಂಡೇಯ ನದಿಯ ಯೋಗಿ ಕೊಳ್ಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಉದ್ಯಮಿಯನ್ನು ಭೀಕರವಾಗಿ ಕೊಲೆಗೈದು ಮೃತದೇಹವನ್ನು ಕೊಳವಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಎಸೆದಿದ್ದಾರೆ.
ಪ್ರಕರಣದ ಬೆನ್ನು ಬಿದ್ದ ಪೊಲೀಸರ ಮುಂದೆ ವೈದ್ಯ ಸಚಿನ್ ಶಿರಗಾಂವಿ ಎಂಬುವವರು ಕೃತ್ಯ ಎಸೆಗಿರುವುದನ್ನು ಒಪ್ಪಿಕೊಂಡಿದ್ದು ಮೃತ ದೇಹದ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹಾಗೂ ಗೋಕಾಕ್ ಡಿಎಸಪಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.