ಅಥಣಿ : ಅಪಘಾತ ಮಾಡಿ ವ್ಯಕ್ತಿ ಕೊಲೆ ; ಆಸ್ತಿಗಾಗಿ ನಡೆದಿತ್ತಾ ಡೆಡ್ಲಿ ಮರ್ಡರ್
ಬೆಳಗಾವಿ : ವ್ಯಕ್ತಿಯನ್ನು ಆಸ್ತಿ ವಿಚಾರವಾಗಿ ಕೊಲೆ ಮಾಡಿ ನಂತರ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ನಿವಾಸಿ ಮಾಣಿಕ ಕೇಶವ ಕದಮ್ ( 50 ) ರಸ್ತೆ ಮೇಲೆ ಸಂಚರಿಸುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿತ್ತು.
ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯ ಬೆನ್ನು ಬಿದ್ದ ಪೊಲೀಸರಿಗೆ ಇದು ಅಪಘಾತ ಅಲ್ಲ. ಕೊಲೆ ಎಂಬುದು ತಿಳಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದಾರೆ.
ಬಳಿಕ ಕೊಲೆಯ ಶಂಕಿತ ಆರೋಪಿಗಳಾಗಿರುವ ಸಂಬರಗಿ ಗ್ರಾಮದ ಭರಮಣ್ಣ ಸೊಡ್ಡಿ, ಲಕ್ಷ್ಮಣ ಸೊಡ್ಡಿ, ರಾಮ ಸೊಡ್ಡಿ, ಅನಿಲ ಕಂಟೆಕರ್ ಹಾಗೂ ಶುಭಾಶ ಸಿಂಗಾಡೆ ಎಂಬ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಏನು ಕಾರಣ : ಮೃತ ವ್ಯಕ್ತಿ ಮಾಣಿಕ ಕೇಶವ ಕದಮ್ ತನ್ನ ಆರು ಎಕರೆ ಜಮೀನನ್ನು ಕೊಲೆ ಆರೋಪಿತರಾದ ಭರಮಣ್ಣ ಸೊಡ್ಡಿ ಎಂಬುವವರಿಗೆ ಮಾರಿದ್ದನು. ಆದರೆ ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು.
ಸುಮಾರು ವರ್ಷಗಳಿಂದ ಕೋರ್ಟ್ ನಲ್ಲಿದ್ದ ಭೂಮಿ ವಿವಾದ
ಮುಗಿಯುವ ಹಂತ ಬಂದ ಹಂತಕ್ಕೆ ತಲುಪಿತ್ತು. ಆರೋಪಿಗಳಿಂದ ಭೂಮಿ ಕೈ ತಪ್ಪುವ ಭೀತಿಯಲ್ಲಿ ಮಾಣಿಕ್ ಕೊಲೆಗೆ ಸಂಚು ರೂಪಿಸಲಾಗಿತ್ತು.
ಮಾಣಿಕನನ್ನು ಕೊಲೆ ಮಾಡಲು ಪ್ಲ್ಯಾನ್ ಹಾಕಿದ್ದ ಭರಮಣ್ಣ ತನ್ನ ಅಳಿಯಂದಿರು ಹಾಗೂ ಮೂವರು ಅಣ್ಣ-ತಮ್ಮಂದಿರು ಸೇರಿ ಮಾಣಿಕನನ್ನು ಬಲಿ ಪಡೆಯಲು ತಂತ್ರ ಹೆಣೆದಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಹೊಸ ಬುಲೆರೋ ಪಿಕಪ್ ವಾಹನದಿಂದ
ಅಪಘಾತ ಮಾಡಿಸಿ ಆರೋಪಿಗಳು ಕೊಲೆ ಮಾಡಿಸಿದ್ದರು. ಈ ಕೊಲೆಯ ಕಾರಣ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಸಂಬರಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು.
ಅಲ್ಲದೆ ಆರೋಪಿಗಳು ಪ್ರಭಾವಿಗಳಾಗಿದ್ದು, ಗ್ರಾಮದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಆತಂಕಕಾರಿ ಘಟನೆಗಳು ಸಂಭವಿಸದಂತೆ ಹಾಗೂ ನಮಗೆ ನ್ಯಾಯ ಸಿಗಬೇಕೆಂದು ಮೃತನ ಕುಟುಂಬಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಮ್ಮ ಕುಟುಂಬಕ್ಕೆ ಆದಂತೆ ಬೇರೆ ಯಾರಿಗೂ ಅನ್ಯಾಯವಾಗಬಾರದು. ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮೃತನ ಪುತ್ರ ಗಣೇಶ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಜಾಡು ಹಿಡಿದ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.