ಬೆಳಗಾವಿಯಲ್ಲಿ ಜರುಗಿದ ಡ್ರೋ-ಇವಿ ಕೈಗಾರಿಕೋದ್ಯಮಿಗಳ ಕಾರ್ಯಾಗಾರ
ಬೆಳಗಾವಿ : ಬಿಯಾಂಡ್ ಬೆಂಗಳೂರು ಕಾರ್ಯಕ್ರಮದಡಿ ಬೆಳಗಾವಿಯನ್ನು ಡ್ರೋನ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಶುಕ್ರವಾರ ನಗರದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಆಯೋಜಿಸಿದ್ದ ಡ್ರೋಇವಿ- 2013’ ಕೈಗಾರಿಕೋದ್ಯಮಿಗಳ ಕಾರ್ಯಾಗಾರ ನಡೆಯಿತು.
ಶುಕ್ರವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಡ್ರೋಇವಿ- 2013 ಸಮಾವೇಶ ಉದ್ಘಾಟಿಸಿದ ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಮಾತನಾಡಿ, ಮೇಕ್ ಇನ್ ಇಂಡಿಯಾ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದ ವಿವಿಧ ಎಂಜಿನಿಯರಿಂಗ್ ಮತ್ತು ಐಐಟಿ ಕಾಲೇಜುಗಳಿಂದ ಹೊರ ಬರುತ್ತಿರುವ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೆಳಗಾವಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಡ್ರೋಇವಿ ಕ್ಲಸ್ಟರ್ ಅವಕಾಶದ ಬಾಗಿಲು ತೆರೆಯಲಿದೆ. ವಿಶೇಷವಾಗಿ ಡ್ರೋನ್ ಮತ್ತು ಇವಿ ಉತ್ಪಾದನೆಯಲ್ಲಿ ಹೊಸ ಮನ್ವಂತರ ಆರಂಭಗೊಳ್ಳಲಿದ್ದು, ಈಗಾಗಲೆ ಒಡಂಬಡಿಕೆ ಮಾಡಿಕೊಂಡಿರುವ ಬಹುತೇಕರು ನವೋದ್ಯಮಿಗಳಾಗಿರುವುದು ವಿಶೇಷ ಮತ್ತು ಪ್ರೇರಣಾದಾಯಕ ವಾತಾವರಣ ನಿರ್ಮಿಸಲಿದೆ ಎಂದರು.
ಆನಲೈನ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್, ಐಟಿ-ಬಿಜಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯ ಕೈಗಾರಿಕಾ ಕ್ಲಸ್ಟರ್‌ಗಳು ಬಿಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸಹಾಯಕವಾಗುತ್ತಿವೆ. ಈ ಭಾಗದಲ್ಲಿರುವ ಪ್ರತಿಭೆಗಳು, ಕೌಶಲ್ಯಭರಿತ ಕಾರ್ಮಿಕ ವರ್ಗಕ್ಕೆ ಸ್ಥಳೀಯವಾಗಿ ಹೆಚ್ಚು ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕೆಡಿಇಎಂ ಬೆಂಬಲದೊಂದಿಗೆ ಎಲೆಕ್ಟ್ರಾನಿಕ್ಸ್ ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಡ್ರೋನ್ ಮತ್ತು ಇವಿ ಕ್ಲಸ್ಟರ್ ಸ್ಥಾಪಿಸುತ್ತಿದೆ. ಇದು ದೇಶದ ಡಿಜಿಟಲೀಕರಣಕ್ಕೆ ಹೊಸ ಕೊಡುಗೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಡಿಇಎಂನ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅನೇಕ ಸ್ಟಾರ್ಟ್ಅಪ್‌ಗಳಿಗೆ ಬೆಳಗಾವಿ ಉತ್ಯುತ್ತಮ ಪರಿಸರ ವ್ಯವಸ್ಥೆ ಒದಗಿಸಿದೆ.ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಡ್ರೋನ್ ಮಾರುಕಟ್ಟೆ ವಾರ್ಷಿಕ ಶೇ. ೧೦ ಮತ್ತು ಇವಿ ಮಾರುಕಟ್ಟೆ ಶೇ. ೫೦ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಹೊಂದಲಾಗಿದ್ದು. ಈ ಬೆಳವಣಿಗೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ. ಇದೇ ಕಾರಣದಿಂದ ಬೆಳಗಾವಿಯಲ್ಲಿ ಹೊಸ ಕ್ಲಸ್ಟರ್ ನಿರ್ಮಾಣಗೊಳ್ಳಲಿದೆ’ ಎಂದು ಹೇಳಿದರು.
ಆರ್ಥಿಕ ಬೆಳವಣಿಗೆಯಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಬೆಳಗಾವಿಯನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಸಮಾಧಾನದ ನಡುವೆಯೇ ಡ್ರೋಇವಿ ಕ್ಲಸ್ಟರ್ ಸ್ಥಾಪನೆಯ ಚಿಂತನೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಉತ್ಸಾಹ ಮೂಡಿಸಿತ್ತಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಬೃಹತ್ ಕೈಗಾರಿಕೋದ್ಯಮಿಗಳ ಗೈರು ಹಾಜರಿ ಸ್ಥಳೀಯರಲ್ಲಿ ಒಂದಿಷ್ಟು ನಿರಾಸೆ ಮೂಡಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ೧೬ ಕೈಗಾರಿಕೋದ್ಯಮಿಗಳು ಡ್ರೋಇವಿ ಕ್ಲಸ್ಟರ್‌ನಲ್ಲಿ ಹೂಡಿಕೆಗೆ ಮುಂದಾಗಿ ಕೆಡಿಇಎಂ ಜತೆಗೆ ಒಡಂಬಡಿಕೆ ಮಾಡಿಕೊಂಡು ೪೦೦ ಕೋಟಿ ರೂ. ಹೂಡಿಕೆಯ ನಿರೀಕ್ಷೆ ಮೂಡಿಸಿರುವುದು ವಿಶೇಷವಾಗಿ ಗಮನ ಸೆಳೆಯಿತು. ಒಡಂಬಡಿಕೆಯಂತೆ ಸರಕಾರ ಆಸಕ್ತಿ ವಹಿಸಿ ಡ್ರೋಇವಿ ಕ್ಲಸ್ಟರ್ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ತಂದರೆ ೧೦ ಸಾವಿರಕ್ಕೂ ಅಧಿಕ ಉದ್ಯೋಗಾಕಾಶ ಸೃಷಿಯಾಗುವ ನಿರೀಕ್ಷೆ ಮೂಡಿಸಿತು.
ಇದೇ ಸಂದರ್ಭದಲ್ಲಿ ಇವಿ ಕ್ಷೇತ್ರದ ಪ್ರಮುಖರು, ಇವಿ ಬಿಡಿ ಉತ್ಪನ್ನಗಳ ತಯಾರಕರು, ಬ್ಯಾಟರಿ ಉತ್ಪಾದಕರು, ಚಾರ್ಜಿಂಗ್ ಸಲಕರಣೆ ಮತ್ತು ಮೂಲಸೌಕರ್ಯ ಪೂರೈಕೆದಾರರು, ಆಟೋಮೊಬೈಲ್ ಘಟಕ ತಯಾರಕರು, ಯುಎವಿ, ಏರೋಸ್ಪೇಸ್ ಘಟಕ ತಯಾರಕರು, ರಿಮೋಟ್ ಪೈಲೆಟ್ ಟ್ರೈನಿಂಗ್ ಆರ್ಗನೈಸೇಷನ್‌ಗಳು, ಪ್ರಮಾಣೀಕೃತ ಡ್ರೋನ್ ಪೈಲಟ್‌ಗಳು ಭಾಗವಹಿಸಿ ತಮ್ಮ ಉತ್ಪನ್ನಗಳ ಪ್ರದರ್ಶನ ಮಾಡಿದರು.
ಸ್ಥಳೀಯ ಉದ್ಯಮಿಗಳಾದ ಸರ್ವೋಕಂಟ್ರೋಲ್ಸ್ನ ದೀಪಕ್ ದಡೂತಿ, ರಿವೊಟ್ ಮೋರ‍್ಸ್ಮ ಅಜಿತ ಪಾಟೀಲ್, ಕೆಎಲ್‌ಎಸ್ ಜಿಐಟಿ ಕಾಲೇಜಿನ ರಾಜ ಬೆಳಗಾಂವಕರ್, ಕೆಎಲ್‌ಇ ಟೆಕ್ನಾಲಜಿಯ ಶಿವಯೋಗಿ ತುರಮರಿ, ಕ್ರೆಡಾಯ್ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಚೆಂಬರ್ ಆಫ್ ಕಾಮರ್ಸ ಮಾಜಿ ಅಧ್ಯಕ್ಷ ರೋಹನ ಜುವಳಿ ಸೇರಿದಂತೆ ಸ್ಥಳೀಯ ನವೋದ್ಯಮಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.