ಡಾ. ಬ್ರೋ ನಿಮ್ಮಜ್ಜಿಗೆ ಗೊತ್ತಾ? ಜೀ ವಾಹಿನಿ ರಾಘವೇಂದ್ರ ಹುಣಸೂರು ವಿರುದ್ಧ ನೆಟ್ಟಿಗರು ಕೆಂಡಾಮಂಡಲ
ಬೆಂಗಳೂರು : ಜೀ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಅವರನ್ನು ಕರೆಸಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉದ್ಧಟತನ ಉತ್ತರ ನೀಡಿದ್ದ ಜೀ ವಾಹಿನಿಯ ರಾಘವೇಂದ್ರ ಹುಣಸೂರು ವಿರುದ್ಧ ನೆಟ್ಟಿಗರು ಕೆಂಡಾಮಂಡಲರಾಗಿದ್ದಾರೆ.
ಹೌದು ಡಾ. ಬ್ರೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ರಾಘವೇಂದ್ರ ಹುಣಸೂರು ಅವರು ನಿಮ್ಮ ಅಜ್ಜಿಗೆ ಗೊತ್ತಾ ಎಂಬ ಮರುಪ್ರಶ್ನೆ ಹಾಕಿದರು. ಜೊತೆಗೆ ಸಧ್ಯಕ್ಕೆ ಅವರನ್ನು ಕರೆಸುವ ಯಾವುದೇ ವಿಚಾರ ಇಲ್ಲ ಎಂದರು. ಆದರೆ ಜಗತ್ತು ಸುತ್ತಾಡಿ ಅದೆಷ್ಟೋ ಮಾಹಿತಿ ನೀಡುವ ಡಾ. ಬ್ರೋ ಅವರ ಬಗ್ಗೆ ಹಗುರವಾಗಿ ಮಾತನಾಡಬಾರದಿತ್ತು ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡದ ಖ್ಯಾತ ಯೂಟ್ಯೂಬರ್ ಪೈಕಿ ಡಾ. ಬ್ರೋ ಒಬ್ಬರು. ಅಪಘಾನಿಸ್ತಾನದಂತ ವಿಲಕ್ಷಣ ದೇಶ ಸುತ್ತಾಡಿ. ಅದೆಷ್ಟೋ ಮಾಹಿತಿಯನ್ನು ಈ ಯುವಕ ನೋಡುಗರಿಗೆ ನೀಡಿದ್ದಾನೆ. ಜೊತೆಗೆ ಜಗತ್ತಿನ ಹಲವು ದೇಶಗಳಲ್ಲಿ ಸುತ್ತಾಡಿ ಜನರಿಗೆ ಮಾಹಿತಿ ನೀಡುವ ಜೊತೆಗೆ ಸ್ವಂತ ದುಡಿಮೆ ಮಾಡುತ್ತಿರುವ ಈ ಯುವಕ ಹಲವರಿಗೆ ಸ್ಪೂರ್ತಿ. ಇಷ್ಟೆಲ್ಲಾ ಇದ್ದರು ಇವರ ಕುರಿತು ಕೇವಲವಾಗಿ ಮಾತಾಡಿದ್ದಕ್ಕೆ ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಖ್ಯಾತ ಸುದ್ದಿ ನಿರೂಪಕ ಚಂದನ್ ಶರ್ಮಾ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಹುಡುಗ ನನಗೂ ಸ್ಪೂರ್ತಿ ಎಂಬಂತೆ ಹೇಳಿದ್ದಾರೆ. ಅವರು ಬರೆದುಕೊಂಡ ವಿವರ ನಿಮ್ಮ ಮುಂದೆ.
ಡಾ. ಬ್ರೋ “ಆ” ಕಾರ್ಯಕ್ರಮಕ್ಕೆ ಬರಬೇಕೋ ಬೇಡವೋ ಅದು ಅವರಿಗೇ ಬಿಟ್ಟ ವಿಷಯ .
ಆದ್ರೆ.. ನನ್ನ ಅಮ್ಮನಿಗೆ ಡಾ. ಬ್ರೋ ಚೆನ್ನಾಗಿ ಗೊತ್ತು. “ನೋಡೋ ಆ ಹುಡ್ಗನ್ನ.. ಏನ್ ಸೂಪರ್ .. ನೀನೂ ಇದ್ಯಾ.. ಊರೆಲ್ಲ ಸುತ್ಕೊಂಡು ಬರ್ತೀಯ.. ಆ ತರ ಮಾತಾಡಕ್ಕಾಗತ್ತ” ಅಂತ ನಾನು ಉಗಿಸಿಕೊಂಡಿರೋದ್ರಿಂದ ನಮ್ಮಮ್ಮ ಆ ಹುಡುಗನ ಫ್ಯಾನು ಅನ್ನೋದು ಗೊತ್ತು.
ಆತನನ್ನು ನಾನು ಒಮ್ಮೆಯೂ ಭೇಟಿಯಾಗಿಲ್ಲ.. ಮಾತನಾಡಿಸಿಲ್ಲ.. ಆದ್ರೆ ನಮ್ಮಮ್ಮ ಹಿಂಗೆಲ್ಲ ಹೇಳ್ದಾಗ.. ಒಂದಿಷ್ಟು ಜನರ ಆಶೀರ್ವಾದ ಗಳಿಸಿರುವ ನನಗೆ…ಅವನ ಮೇಲೆ ತುಸು ಜಾಸ್ತಿಯೇ ಪ್ರೀತಿಯೂ.. ಅಚ್ಚರಿಯೂ.. ಚೂರೇ ಚೂರು ಸಿಹಿಯಾದ ಹೊಟ್ಟೆ ಉರಿಯೂ ಎಲ್ಲ ಆಗಿದ್ದೂ ಉಂಟು!
ಅಂದ ಹಾಗೆ, ನಮ್ಮ ಪಕ್ಕದ ಮನೆಯ ಅಜ್ಜಿಗೆ ಡಾ.ಬ್ರೋ ಗೊತ್ತು. ಎದುರುಗಡೆ ಮನೆ ಅಜ್ಜಿಗೆ ಗೊತ್ತಿಲ್ಲ.. ಕಾರಣ ನಮ್ಮ ಎದುರಿಗೆ ಮನೆನೇ ಇಲ್ಲ! unfortunately, ನಮ್ಮಜ್ಜಿಗೆ ಡಾ. ಬ್ರೋ ಗೊತ್ತಿಲ್ಲ.. ಯಾಕಂದ್ರೆ ನಮ್ಮಜ್ಜಿ ತೀರ್ಕೊಂಡು ಎರಡು ವರ್ಷ ಆಯ್ತು!