ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಮೈತ್ರಿ ; ಬೆಳಗಾವಿಯಲ್ಲಿ ಎಲ್ಲವೂ ಸಾಧ್ಯ…?
ಚಿಕ್ಕೋಡಿ : ಸಾಮಾನ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕೀಯ ವಿರೋಧಿ ಬಣಗಳು. ಅಧಿಕಾರಕ್ಕಾಗಿ ಯಾವ ಮಟ್ಟಿಗಿನ ಹೋರಾಟಕ್ಕೂ ಹಿಂದೆ, ಮುಂದೆ ನೋಡದ ಕಾರ್ಯಕರ್ತರು ಇಲ್ಲಿದ್ದಾರೆ. ಆದರೆ ಇವೆರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುವ ಚಾಣಾಕ್ಷ ರಾಜಕಾರಣ ಬೆಳಗಾವಿಯಲ್ಲಿ ಸಾಧ್ಯ.
ಗುರುವಾರ ನಡೆದ ಚಿಕ್ಕೋಡಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಸೇರಿ ಅಧಿಕಾರದ ಚುಕ್ಕಾಣಿ ಹಿಡಿದಿರುವದು ಅಚ್ಚರಿ ಮೂಡಿಸಿದೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಏನಾದರು ಸಾಧ್ಯ ಎಂಬುದು ಈ ಒಂದು ಘಟನೆಯಿಂದ ಸ್ಪಷ್ಟವಾಗಿದೆ.
ಪುರಸಭೆಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೇ ಕೈ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು ಅಚ್ಚರಿ ಮೂಡಿಸಿದೆ. ಒಟ್ಟು 23 ಸ್ಥಾನದಲ್ಲಿ 13 ಬಿಜೆಪಿ 10 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯಾಗಿದ್ದರು.
ಮೊದಲನೇ ಅವಧಿಯಲ್ಲಿ ಬಿಜೆಪಿ ಪಕ್ಷದವರೇ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡನೇ ಅವಧಿಯಲ್ಲಿ ಬಿಜೆಪಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿಗಳ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಸಂಸದರು ಚಿಕ್ಕೋಡಿಯಿಂದ ಆಯ್ಕೆಯಾದ ಕಾರಣ ಕಾಂಗ್ರೆಸ್ ಬಲಾಬಲ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ.
ಚಿಕ್ಕೋಡಿ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ ರಾಗಿ ಬಿಜೆಪಿ ವೀಣಾ ಜಗದೀಶ್ ಕವಟಗಿಮಠ ಉಪಾದ್ಯಾಕ್ಷರಾಗಿ ಕಾಂಗ್ರೆಸ್ ಪಕ್ಷದ ಇರ್ಫಾನ್ ಬೇಪಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಒಗ್ಗಟ್ವು ಪ್ರದರ್ಶಿಸಿದ್ದಾರೆ.