Select Page

ಕಪ್ಪು ಚುಕ್ಕೆ ಇಲ್ಲದಂತೆ ಸಂಸ್ಥೆಗಳು ಬೆಳೆಯಲಿ: ಸ್ವಾಮಿ ಮುಕ್ತಿವೃತಾನಂದಜೀ

ಕಪ್ಪು ಚುಕ್ಕೆ ಇಲ್ಲದಂತೆ ಸಂಸ್ಥೆಗಳು ಬೆಳೆಯಲಿ: ಸ್ವಾಮಿ ಮುಕ್ತಿವೃತಾನಂದಜೀ

ಬೆಳಗಾವಿ : ಸ್ವಾಮಿ ವಿವೇಕಾನಂದರ ವಿಚಾರಧಾರೆಯಂತೆ ಸಂಘಟನಾ ತತ್ವ ಅಳವಡಿಸಿಕೊಂಡು ಸೇವಾ ಮನೋಭಾವನೆ ಇಟ್ಟುಕೊಂಡು ಸಹಕಾರ ಸಂಸ್ಥೆಗಳು ಗ್ರಾಹಕರ ವಿಶ್ವಾಸ ಗಳಿಸಬೇಕು ಎಂದು ಬೆಳಗಾವಿ ಕೋಟೆ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ಸ್ವಾಮಿ ಮುಕ್ತಿವೃತಾನಂದಜೀ ಮಹಾರಾಜ ಸಲಹೆ ನೀಡಿದರು.

ನಗರದ ಭಡಕಲ್ ಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 10ನೇ ವಾರ್ಷಿಕ ಸಭೆ ನಿಮಿತ್ತ ನಡೆದ ಸಾಧಕರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು. 

1892ರಲ್ಲಿ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಆಗಮಿಸಿದ್ದರು. 1893ರಲ್ಲಿ ಚಿಕ್ಯಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಸಂಘಟನೆ, ಸಮಾಜದ ಕಳಕಳಿ, ಸೇವಾ ಮನೋಭಾವನೆ ಮುಂತಾದ ವಿಷಯಗಳ ಬಗ್ಗೆ ಪ್ರಮುಖವಾಗಿ ಜಗತ್ತಿಗೆ ಮಾರ್ಗದರ್ಶನ ನೀಡಿದ್ದರು. ಯಾವುದೇ ಸಂಸ್ಥೆಗಳು ಈ ವಿಚಾರಗಳನ್ನು ಅಳವಡಿಸಿಕೊಂಡು ಕಠಿಣ ಪರಿಶ್ರಮ, ಸಮಾಜದ ಬಗ್ಗೆ ತುಡಿತ ಹೊಂದಿರಬೇಕು ಎಂದರು. 

ನಾವು ಯಾವುದೇ ವಿಷಯವನ್ನು ದೊಡ್ಡದಾಗಿ ಯೋಚಿಸಿ ಕಾರ್ಯರೂಪಕ್ಕೆ ತರಬೇಕು. ಆದರೆ ನಾವು ಸೀಮಿತ ಯೋಚನೆ ಮಾಡುತ್ತೇವೆ. ದೊಡ್ಡ ವಿಚಾರಕ್ಕಿಳಿದು ಕೆಲಸ ಮಾಡಿದ್ದಲ್ಲಿ ಮಹತ್ತರವಾದ ಗುರಿ ಸಾಧಿಸಲು ಸಾಧ್ಯವಿದೆ. ನಮ್ಮ ವೃತ್ತಿಯಲ್ಲೂ ದೊಡ್ಡ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು. 

ಡಾ. ನಾರಾಯಣ ನಾಯ್ಕ ಅವರ ಸಮರ್ಥ ನೇತೃತ್ವದಲ್ಲಿ ಗುರು ವಿವೇಕಾನಂದ ಸಹಕಾರ ಸಂಘ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಕ್ರಿಯಾಶೀಲತೆ ಮುಂತಾದ ಆದರ್ಶ ಗುಣಗಳನ್ನು ಹೊಂದುವ ಮೂಲಕ ಸಹಕಾರಿ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವುದು ನಿಜಕ್ಕೂ ಇನ್ನುಳಿದ ಸಂಘ-ಸಂಸ್ಥೆಗಳಿಗೆ ಅನುಕರಣೀಯ ಎಂದು ಶ್ಲಾಘಿಸಿದರು. 

ಗುರು ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಫಲಾಪೇಕ್ಷೆ, ದುರಾಸೆ ಇಲ್ಲದೇ 2013ರಲ್ಲಿ ಸ್ಥಾಪನೆಯಾಗಿದೆ. ಸಮಾನ ಮನಸ್ಕರ ಆಶಯದಂತೆ ಪ್ರಾಮಾಣಿಕತೆ ಧ್ಯೇಯ ಇಟ್ಟುಕೊಂಡು ಬಡವರು, ದೀನ-ದಲಿತರಿಗೆ ನೆರವಾಗುವ ಗುರಿ-ಉದ್ದೇಶ ಹೊಂದಿ ಉದಯಿಸಿದೆ. ಏನೇ ಬಂದರೂ ಎದುರಿಸುತ್ತೇವೆ ಎಂಬ ಛಲ ಮೈಗೂಡಿಸಿಕೊಂಡಿದ್ದರಿಂದ 10 ವರ್ಷಗಳಿಂದಲೂ ಅದರಲ್ಲೂ ಕೊರೊನಾ ಕಾಲ ಘಟ್ಟದಲ್ಲೂ ಸಂಸ್ಥೆ ‘ಎ’ ಗ್ರೇಡ್ ಪಡೆಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಸಂಸ್ಥೆಯ ಸದಸ್ಯರಿಗೆ ಶೇ. 20ರಷ್ಟು ಡಿವಿಡೆಂಟ್ ಕೊಡಲು ಘೋಷಿಸಲಾಗಿದೆ ಎಂದರು.

ದೇಶ, ಸಂಸ್ಥೆ ಉನ್ನತಿಯಾಗಲು ಆರ್ಥಿಕ ಶಿಸ್ತು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಸಂಸ್ಥೆ ಒಂಬತ್ತು ವರ್ಷಗಳಿಂದ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿದೆ. ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಗ್ರಾಹಕರ ಸೇವೆಯೊಂದಿಗೆ ತನ್ನ ಅಸ್ತಿತ್ವ ಕಾಪಾಡಿಕೊಂಡು ಬರುವುದು ಅಷ್ಟು ಸುಲಭವಲ್ಲ. ಈ ಸಂಸ್ಥೆ ತನ್ನ ಬೆಳವಣಿಗೆಯನ್ನು ಉಳಿಸಿಕೊಂಡು ಮಾದರಿ ಸಂಸ್ಥೆಯಾಗಲು ಅದರ ಶ್ರೇಯಸ್ಸು ಗ್ರಾಹಕರಿಗೆ ಸಲ್ಲುತ್ತದೆ. ನಿರ್ದೇಶಕರು, ಸಿಬ್ಬಂದಿಯ ಸಾಂಘಿಕ ಕಾರ್ಯದಿಂದ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಬೆಳೆದು ನಿಂತಿದೆ ಎಂದರು. 

ರಾಜ್ಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉಮೇಶ ಬಾಳಿ ಮಾತನಾಡಿ, ಸಹಕಾರ ಸಂಸ್ಥೆ ಬೆಳೆಯಬೇಕಾದರೆ ನಿಸ್ವಾರ್ಥ ಸೇವೆ ಮುಖ್ಯವಾಗಿರುತ್ತದೆ. ಸಂಸ್ಥೆಯ ಕೆಲಸ ನಮ್ಮದು ಎಂಬ ಭಾವನೆಯಿಂದ ಮಾಡಬೇಕು. ಗ್ರಾಹಕರು ವಿಶ್ವಾಸದಿಂದ ಇಟ್ಟಿರುವ ಠೇವಣಿಗೆ ಈ ಸೊಸೈಟಿ ಹೆಚ್ಚಿನ ಡಿವಿಡೆಂಟ್ ನೀಡುತ್ತಿದೆ. ಸಾಲ ಪಡೆದವರು ಸಕಾಲಕ್ಕೆ ಪ್ರಾಮಾಣಿಕವಾಗಿ ಮರುಪಾವತಿಸಬೇಕು. ನಾರಾಯಣ ನಾಯ್ಕರ ಮಾರ್ಗದರ್ಶನದಲ್ಲಿ ಗುರು ವಿವೇಕಾನಂದ ಸೊಸೈಟಿ ಸಹಸ್ರಾರು ಕುಟುಂಬಗಳ ಪಾಲಿಗೆ ಬೆಳಕಾಗಿದೆ ಎಂದು ಹೇಳಿದರು. 

ಪರಿಸರವಾದಿ ಶಿವಾಜಿ ಕಾಗಣೇಕರ ಮಾತನಾಡಿ, ಸಹಕಾರಿ ಕಲ್ಪನೆ ಸಮಾಜದಲ್ಲಿ ಬಂದಾಗಿನಿAದ ಬಡವರ ಆರ್ಥಿಕ ಏಳ್ಗೆ ಸಾಧ್ಯವಾಗಿದೆ. ಗುರು ವಿವೇಕಾನಂದ ಸೊಸೈಟಿ ಸಾಧನೆ ಹೆಮ್ಮೆ ಎನಿಸುತ್ತಿದೆ ಎಂದರು. 

ಪರಿಸರವಾದಿ ಶಿವಾಜಿ ಕಾಗಣೇಕರ, ಹೊಟೇಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿಜಯ ಸಾಲ್ಯಾನ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಶ್ರೀಕಾಂತ ಕೊಂಕಣಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧ ಸಿದ್ದಪ್ಪ ಹುಂದ್ರೆ, ಮಾಧ್ಯಮ ಕ್ಷೇತ್ರದಲ್ಲಿ ರಾಜಶೇಖರ ಪಾಟೀಲ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಾಗರತ್ನಾ, 

ಸಾವಯವ ಕೃಷಿಕ ಪ್ರಕಾಶ ಕುಲಕರ್ಣಿ, ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ರ‍್ಯಾಂಕ್ ಗಳಿಸಿದ ರುಚಾ ಪಾವಶೆ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಗಳಿಸಿದ ರವೀನಾ ಬಸರಿಮರದ, ನೃತ್ಯ ಸ್ಪರ್ಧೆಯಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದ ಪೃಥ್ವಿರಾಜ ಹೊಂಗಾರಿ, ಮಾದರಿ ಸರ್ಕಾರಿ ಶಾಲೆ ಭೂತರಾಮನಹಟ್ಟಿ ಶಾಲೆ, ಅತ್ಯುತ್ತಮ ಸೇವಾ ಸಂಘಟನೆ ನಮ್ಮ ಕನಸು ತಂಡವನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಭಾರತಿ ಶೆಟ್ಟಿಗಾರ, ರೂಪಾ ಮಗದುಮ್ಮ, ರಾಜೇಶ ಗೌಡ, ಆನಂದ ಶೆಟ್ಟಿ, ಗಣೇಶ ಮರಕಾಲ, ಸತೀಶ ಮನ್ನಿಕೇರಿ, ದುರ್ಗಪ್ಪ‌ ತಳವಾರ, ಸುರೇಶ ನಾಯಿರಿ, ಸಿಬ್ಬಂದಿ, ಸದಸ್ಯರು ಇದ್ದರು. ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿಶಾಲ ಪಾಟೀಲ ವರದಿ ವಾಚಿಸಿದರು. ಭೈರೋಬಾ ಕಾಂಬಳೆ ಪರಿಚಯಿಸಿದರು. ಉಪಾಧ್ಯಕ್ಷ ಆನಂದ ಪಿ.ರಾವ್ ಸ್ವಾಗತಿಸಿದರು. ಮಲ್ಲೇಶ ದೊಡ್ಡಲಕ್ಕನ್ನವರ ನಿರೂಪಿಸಿದರು. ಅಂಜನಕುಮಾರ ಗಂಡಗುದ್ರಿ ವಂದಿಸಿದರು. 

Advertisement

Leave a reply

Your email address will not be published. Required fields are marked *