
ಬೈಲಹೊಂಗಲ : ಸಾವಿನಲ್ಲಿಯೂ ಒಂದಾದ ಮಾವ ಅಳಿಯ

ಬೈಲಹೊಂಗಲ : ತಾಲೂಕಿನ ನಮ್ಮೂರು ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಕ್ಕ ಪಕ್ಕದ ಮನೆಯ ಸೋದರ ಮಾವ-ಅಳಿಯ ಒಂದೇ ದಿನ ನಿಧನರಾಗುವ ಮೂಲಕ ಸಾವಿನಲ್ಲಿಯೂ ಒಂದಾಗಿದ್ದಾರೆ.
ಹೌದು ಒಕ್ಕುಂದ ಗ್ರಾಮದ 82 ವರ್ಷದ ಬಸವಣೆಪ್ಪ ಶಿವಲಿಂಗಪ್ಪ ಭದ್ರಶೆಟ್ಟಿ ನಿನ್ನೆ ರಾತ್ರಿ ಮೃತರಾದರೆ, ಇಂದು ಬೆಳಿಗ್ಗೆ 73 ವರ್ಷದ ನಂದೆಪ್ಪ ಮಡಿವಾಳಪ್ಪ ಹಾದಿಮನಿ ನಿಧನರಾಗಿದ್ದಾರೆ.
ಇಬ್ಬರೂ ಕೂಡ ಅಕ್ಕ ಪಕ್ಕದ ಮನೆಯವರು. ಮೇಲಾಗಿ ಸೋದರ ಮಾವ, ಅಳಿಯ ಕೂಡ ಹೌದು. ಕೂಡಿ ಆಡಿ ಬೆಳೆದು, ಜೀವನದ ಬಹಳಷ್ಟು ಸಮಯ ಒಟ್ಟಾಗಿ ಕಳೆದವರು. ಇಂದು ಸಾವಿನಲ್ಲಿಯೂ ಒಂದಾಗಿ ಬಾರದ ಲೋಕಕ್ಕೆ ಜೋಡಿಯಾಗಿಯೇ ಪಯಣ ಬೆಳೆಸಿದ್ದಾರೆ. ನಂತರ ಕುಟುಂಬಸ್ಥರು, ಗ್ರಾಮದ ಹಿರಿಯರು ಕೂಡಿಕೊಂಡು ಒಂದೇ ಟ್ರ್ಯಾಕ್ಟರನಲ್ಲಿ ಇಬ್ಬರ ಪಾರ್ಥಿವ ಶರೀರಗಳ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ನಂತರ ಗ್ರಾಮದ ಸ್ಮಶಾನದಲ್ಲಿ ಮೃತ ಹಿರಿಯ ಜೀವಿಗಳ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೃತರ ಅಂತಿಮ ದರ್ಶನ ಪಡೆದುಕೊಂಡರು.
ಮೃತ ಬಸವಣೆಪ್ಪ ಭದ್ರಶೆಟ್ಟಿ ಅವರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತ ನಂದೆಪ್ಪ ಹಾದಿಮನಿ ಅವರು ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.