ಅಥಣಿ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ : ಬಡವರ ಬಲಿ ಪಡೆಯಲು ಕಾಯುತ್ತಿರುವ ವಿದ್ಯುತ್ ಕಂಬ
ಅಥಣಿ : ಅಥಣಿ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ವಿದ್ಯಾನಗರ ತೋಟದ ವಿದ್ಯುತ್ ಕಂಬಗಳು ರೈತರ ಪ್ರಾಣ ಹೀರಲು ಬಕ ಪಕ್ಷಿಯಂತೆ ಕಾಯ್ದು ಕುಳಿತಿದ್ದು, ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಿಂದ ಎಚ್ಚರವಾಗುತ್ತಿಲ್ಲ.
ಕೃಷ್ಣಾ ನದಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾದ ಸಪ್ತಸಾಗರ ಗ್ರಾಮ ಕಳೆದ 2018 ರಿಂದ ನಿರಂತರ ಭೀಕರ ಪ್ರವಾಹಕ್ಕೆ ತುತ್ತಾಗುತ್ತಿದೆ. ಪ್ರವಾಹದ ರಭಸಕ್ಕೆ ವಿದ್ಯುತ್ ಕಂಬಗಳು ವಾಲುವುದು ಸರ್ವೆ ಸಾಮಾನ್ಯ. ಆದರೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಅಲ್ಪ ಸ್ವಲ್ಪ ರಿಪೇರಿ ಕೆಲಸ ಮಾಡಿ ಹೋದರೆ ಮುಗಿಯಿತು ವಾಪಸ್ ಆ ಕಡೆಗೆ ನೋಡುವುದೇ ಇಲ್ಲ. ಇದರಿಂದ ತೋಟದಲ್ಲಿ ಕೆಲಸ ಮಾಡುವ ರೈತರು ಜೀವ ಕೈಯಲ್ಲಿ ಹಿಡಿದು ದಿನ ಸಾಗಿಸುವಂತಾಗಿದೆ. (HE’S COM)
ಸಪ್ರಸಾಗರ ಗ್ರಾಮದ ಸಿದ್ದಾಪುರ ರಸ್ತೆಯಿಂದ ವಿದ್ಯಾನಗರ ತೋಟಕ್ಕೆ ಹೋಗುವ ಉಪಾಧ್ಯಾಯ ವಿದ್ಯುತ್ ಸಂಪರ್ಕ ಯಾವಾಗ ನೆಲಕ್ಕೆ ಉರುಳುತ್ತದೆ ಎಂಬ ಭೀತಿ ಎದುರಾಗಿದೆ. ಅವೈಜ್ಞಾನಿಕ ಸಂಪರ್ಕದಿಂದ ರೈತರು ಭಯದಿಂದ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅನೇಕ ಬಾರಿ ಸ್ಥಳೀಯ ಲೈನ್ಮನ್ ಗಳಿಗೆ ಮಾಹಿತಿ ನೀಡಿದರು ಏನು ಪ್ರಯೋಜನ ಕಾಣುತ್ತಿಲ್ಲ. ಅಧಿಕಾರಿಗಳು ಮಾತ್ರ ಹೆಸ್ಕಾಂ ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ದುರದೃಷ್ಟಕರ.
ಇರುವುದು ಒಂದು ಏಕರೆ ಜಮೀನು : ಕುಳಿತಿದ್ದು 12 ವಿದ್ಯುತ್ ಕಂಬ : ಇನ್ನೂ ಸಪ್ತಸಾಗರ ಗ್ರಾಮದ ಪರಯ್ಯ ಮಠಪತಿ ಎಂಬುವವರ ಒಂದು ಎಕರೆ ಜಮೀನಿನ ಮಧ್ಯ ಒಟ್ಟು 12 ವಿದ್ಯುತ್ ಕಂಬ ಹಾಗೂ ಎರಡು ಟ್ರಾಸ್ಪಾರ್ಮರ್ ಅಳವಡಿಸಲಾಗಿದೆ. ಕಳೆದ 20 ವರ್ಷಗಳಿಂದ ಕಷ್ಟಪಟ್ಟು ಕಬ್ಬು ಬೆಳೆಯುವ ರೈತನಿಗೆ ವಿದ್ಯುತ್ ಕಂಬಗಳು ನಡು ತೋಟದಿಂದ ಒಂದೆಡೆ ಬದಿಗೆ ಹೋದರೆ ಸಾಕು ಎಂಬಂತಾಗಿದೆ. ಈ ಕುರಿತು ಅದೆಷ್ಟೋ ಬಾರಿ ಅಧಿಕಾರಿಗಳ ಬಳಿ ಹೋದರು ಯಾವುದೇ ಪ್ರಯೋಜನವಾಗಿಲ್ಲ.
ಹೊಲದ ಒಂದು ಸೈಡಿಗೆ ವಿದ್ಯುತ್ ಕಂಬ ಅಳವಡಿಸಲು ಮನವಿ : ಕೇವಲ ಒಂದು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ರೈತನಿಗೆ ಕಟಾವು ಮಾಡಿದ್ದ ಕಬ್ಬನ್ನು ಕಾರ್ಖಾನೆಗೆ ಸಾಗಿಸುವುದು ಕಷ್ಟವಾಗಿದೆ. ಕೇವಲ 20 ಅಡಿ ಅಗಲವಿರುವ ಹೊಲದಲ್ಲಿ ಅರ್ಧದಷ್ಟು ವಿದ್ಯುತ್ ಕಂಬಗಳೇ ಕುಳಿತಿದ್ದು ಕಬ್ಬು ಹೋಗಲು ರಸ್ತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಅವೈಜ್ಞಾನಿಕ ವಿದ್ಯುತ್ ಸಂಪರ್ಕ ನೀಡುರುವುದರಿಂದ ವಿದ್ಯುತ್ ಕಂಬಗಳು ಉರುಳಿ ಬೀಳುವ ಭೀತಿ ಎದುರಾಗಿದೆ. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಮುಂಚೆ ಅಧಿಕಾರಿ ಕಣ್ತೆರೆದು ಸಮಸ್ಯೆಗೆ ಪರಿಹಾರ ನೀಡಿದರೆ ಒಳಿತು ಎನ್ನುತ್ತಾರೆ ರೈತರು.