ಪಿಡಿಒ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ಖಾಕಿ ಹಿಂದೇಟು…?
ಬೆಳಗಾವಿ : ನಿಯಮಬಾಹಿರವಾಗಿ ಆಸ್ತಿ ದಾಖಲೆ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ ಮಾಡಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಕಲಿ ದಾಖಲೆ ಆಧಾರದ ಮೇಲೆ ಆಸ್ತಿ ಉತಾರ ನೀಡುವಂತೆ
ಮಾಡಮಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಗೌಡ ಪಾಟೀಲ್ ಎಂಬುವವರಿಗೆ ಪದೇ ಪದೇ ಕಿರುಕುಳ ನೀಡಲಾಗಿದೆ. ಕೊನೆಗೂ ನಿಯಮಬಾಹಿರ ಕೆಲಸಕ್ಕೆ ಒಪ್ಪಿಕೊಳ್ಳದ ಪಿಡಿಒ ಮೇಲೆ ನಾಲ್ವರು ಕಳೆದ ಸೋಮವಾರ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದ ಮಾಡಮಗೇರಿ ಗ್ರಾಮದ ಪರಮೇಶ್ ಚತ್ರಕೋಟಿ, ಹನಮಂತ ಸಿದ್ದಣ್ಣವರ, ಸಿದ್ದಪ್ಪ ಚಿಕ್ಕಣ್ಣವರ, ಯಲ್ಲಪ್ಪ ಕೆಮ್ಮಣಕೋಲ ಎಂಬುವವರ ಮೇಲೆ ಸರಕಾರಿ ಅಧಿಕಾರಿ ಕರ್ತವ್ಯದಲ್ಲಿರುವ ವೇಳೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ಹಿಂದೇಟು : ಕರ್ತವ್ಯನಿರತ ಪಿಡಿಒ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳನ್ನು ಬಂಧಿಸುವ ಮೂಲಕ ಸರಕಾರಿ ನೌಕರರ ರಕ್ಷಣೆ ನೀಡುವಂತೆ ನೌಕರರ ಸಂಘ ಆಗ್ರಹಿಸಿದೆ.


