
ಯುವಕನಿಗೆ ಚೂರಿ ಇರಿದ ಬಿಎಸ್ಎಫ್ ಯೋಧ ಹಿಂಡಲಗಾ ಜೈಲಿಗೆ

ಬೆಳಗಾವಿ : ಹೊಟೇಲ್ ಒಂದರಲ್ಲಿ ಬಿಲ್ ಕೊಡುವ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನಿಗೆ ಬಿಎಸ್ಎಫ್ ಯೋಧ ಚೂರಿ ಇರಿದ ಪ್ರಕರಣ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಳಗಾವಿಯ ಸದಾಶಿವ ನಗರದಲ್ಲಿರುವ ಆಯಿ ಹೊಟೇಲ್ ನಲ್ಲಿ ಊಟಕ್ಕೆಂದು ಗ್ಯಾಂಗವಾಡಿಯ ಯುವಕರು ಬಂದಿದ್ದರು. ಊಟವಾದ ನಂತರ ಮಾಲಿಕನಿಗೆ ಹಣ ಕೊಡುವ ವಿಚಾರದಲ್ಲಿ ಕಿರಿಕ್ ನಡೆದಿದೆ. ಅಲ್ಲೇ ಕುಂತಿದ್ದ ಬಿಎಸ್ಎಫ್ ಯೋಧ ಪರುಶರಾಮ ರಾಮಗೊಂಡನವರ ಗಲಾಟೆ ಬಿಡಿಸಲು ಹೋಗಿದ್ದಾನೆ.
ಯೋಧ ಗಲಾಟೆ ಬಿಡಿಸುವ ಸಂದರ್ಭದಲ್ಲಿ ಗ್ಯಾಂಗ್‌ವಾಡಿಯ ಅಲ್ತಾಫ್ ಚೌಗುಲೆ ಜೊತೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಬಿಎಸ್ಎಫ್ ಯೋದ ಅಲ್ತಾಫ್ ಗೆ ಚಾಕುವಿನಿಂದ ಇರಿದಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಿಎಸ್ಎಫ್ ಯೋಧನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.