
IPS ಅಧಿಕಾರಿ ತಂದೆ ಜಮೀನಿನಲ್ಲಿ ಅಕ್ರಮ ಮರಳು ದಾಸ್ತಾನು ;ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೋಟಿಸ್ ಜಾರಿ

ಬೆಳಗಾವಿ : ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ರವೀಂದ್ರ ಕೆ. ಗದಾಡಿ ಅವರ ತಂದೆಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
ಅಥಣಿ ತಾಲೂಕಿನ ಐಗಿಳಿ ಗ್ರಾಮದ ಸರ್ವೇ ನಂಬರ್ 215 ರಲ್ಲಿ ಕಾಶಪ್ಪ ಗದಾಡಿ ಅವರಿಗೆ ಸಂಬಂಧಿತ ಜಮೀನಿನಲ್ಲಿ, ಅನಧಿಕೃತವಾಗಿ 210 ಬ್ರಾಸ್ ಮರಳು ದಾಸ್ತಾನು ಮಾಡಿದ್ದು ಕಂಡುಬಂದಿದೆ. ಈ ಕುರಿತು ಸಾಕ್ಷಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಖುದ್ದು ಹಾಜರಾಗಿ ಮರಳು ದಾಸ್ತಾನು ಪರವಾನಗಿ ಸೇರಿದಂತೆ ದಾಖಲೆ ಸಲ್ಲಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗದೆ.
ಕಳೆದ ಹತ್ತು ದಿನಗಳ ಹಿಂದೆ ನೋಟಿಸ್ ನೀಡಿದ್ದು ಈವರೆಗೂ ಮರಳು ವಶಕ್ಕೆ ಪಡೆದಿಲ್ಲ ಕೂಡಲೇ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಎಂ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿನೋದ್ ಚಕ್ರವರ್ತಿ ಎಂಬುವವರು ದೂರು ಸಲ್ಲಿಸಿದ್ದಾರೆ.

ಇಲ್ಲಿ ಸಾಮಾನ್ಯವಾಗಿ ಕಾಡುವ ಪ್ರಶ್ನೆ ಏನೆಂದರೆ ನದಿ ಮರಳನ್ನು ಈ ರೀತಿಯಾಗಿ ಜನಸಾಮಾನ್ಯರು ದಾಸ್ತಾನು ಮಾಡಲು ಕಾನೂನಿನಲ್ಲಿ ಅವಕಾಶ ಇದೆಯಾ ಎಂಬುದು. ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರಾ ಎಂಬುದು ಜನರ ಪ್ರಶ್ನೆಯಾಗಿದೆ.
ಒಂದುವೇಳೆ ಅಧಿಕಾರಿ ತಂದೆ ತೋಟದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದು ಕಾನೂನು ಪ್ರಕಾರ ಸರಿಯಾಗಿದ್ದರೆ ಈ ಕುರಿತು ಸಂಭಂಧಿಸಿದ ಅಧಿಕಾರಿಗಳು ಘೋಷಣೆ ಮಾಡಿದರೆ ಪ್ರಕರಣ ನಿಖರತೆ ಜನರಿಗೂ ಅರ್ಥವಾಗುತ್ತದೆ.