ಕುತೂಹಲ ಮೂಡಿಸಿದ ಹೊಸ ಸುದ್ದಿವಾಹಿನಿ “ವಿಸ್ತಾರ ಮಿಡಿಯಾ”
ಬೆಂಗಳೂರು : ಖ್ಯಾತ ಪತ್ರಕರ್ತ, ಬರಹಗಾರ, ಅಂಕಣಕಾರರಾದ ಹರಿಪ್ರಕಾಶ್ ಕೋಣೆಮನೆ ಅವರ ಸಾರಥ್ಯದಲ್ಲಿ, ಕನ್ನಡಿಗರ ಮುಂದೆ ಬರುತ್ತಿರುವ “ವಿಸ್ತಾರ ಮಿಡಿಯಾ” ಹೆಸರಿನ ನೂತನ ವಾಹಿನಿ ಪ್ರಾರಂಭದ ಮುಂಚೆಯೇ ಸಂಚಲನ ಹುಟ್ಟುಹಾಕಿದೆ.
ಹರಿಪ್ರಕಾಶ್ ಕೋಣೆಮನೆ ಎಂದರೆ ಶಿಸ್ತು, ಸಂಯಮ ಹಾಗೂ ಸದಾಕಾಲವೂ ಲವಲವಿಕೆಯಿಂದ ಇರುವ ವ್ಯಕ್ತಿತ್ವ. ಕನ್ನಡದ ಜನಪ್ರಿಯ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳ ಯಶಸ್ವಿ ಸಂಪಾದಕರಾದವರು ಇವರು. ಪತ್ರಿಕೆಗಳಲ್ಲಿ ಹೊಸ ಬಗೆಯ ಚಿಂತನೆ ಹುಟ್ಟುಹಾಕಿ ಪತ್ರಿಕೆಗಳ ವರದಿಗಾರರಿಗೂ ಡಿಜಿಟಲ್ ಪಾಠ ಹೇಳಿಕೊಟ್ಟ ಶ್ರೇಯಸ್ಸು ಇವರಿಗೆ ಸಲ್ಲಬೇಕು.
ಹರಿಪ್ರಕಾಶ್ ಕೋಣೆಮನೆ ಹೋದಂತೆಲ್ಲ ಅವರ ಹಿಂದೆ
ಅದೃಷ್ಟಲಕ್ಷ್ಮೀ ಬೆನ್ನು ಹತ್ತುತ್ತಾಳೆ ಎಂಬ ಮಾತಿದೆ. ಇವರು ಯಾವುದೇ ಸುದ್ದಿಮನೆ ಪ್ರವೇಶಿಸಿದರು ಹೊಸ ಬಗೆಯ ಆವಿಷ್ಕಾರಗಳ ಮೂಲಕ ಓದುಗರನ್ನು ತಮ್ಮತ್ತ ಸೆಳೆಯುವ ಇವರ ವ್ಯಕ್ತಿತ್ವ, ಹಾಗೂ ಕಾಯಕ ಪ್ರವೃತ್ತಿ ಯಾವತ್ತೂ ಉತ್ಸಾಹಿ ಯುವ ಪತ್ರಕರ್ತರಿಗೆ ಮಾದರಿ ಎಂದರೆ ತಪ್ಪಾಗಲಾರದು.
ಕೋಣೆಮನೆ ಅವರ ಸಂಪಾದಕತ್ವದಲ್ಲಿ ಹೊಸದಾಗಿ ಕನ್ನಡ ನಾಡಿಗೆ ಕಾಲಿಡುತ್ತಿರುವ ವಿಸ್ತಾರ ನ್ಯೂಸ್ ಬರುವ ಶನಿವಾರ ಜುಲೈ 23 ರಂದು ಉದ್ಘಾಟನೆಯಾಗಲಿದೆ. ಆದರೆ ಈವರೆಗೆ, ಯಾವೆಲ್ಲ ಅವತರಣಿಕೆ ಹೊತ್ತುಕೊಂಡು ಈ ಸುದ್ದಿ ವಾಹಿನಿ ಕೆಲಸ ಮಾಡುತ್ತದೆ ಎಂಬುದರ ಕುರಿತು ಯಾವುದೇ ಸಣ್ಣ ಸುಳಿವನ್ನು ತಂಡ ಬಿಟ್ಟುಕೊಟ್ಟಿಲ್ಲ.
ಆದರೆ ಕಳೆದ ಒಂದು ವಾರದಿಂದ ಪೋಸ್ಟರ್ ಬಿಡುಗಡೆ ಮಾಡಲಾಗುತ್ತಿದ್ದು ಅಲ್ಲಿನ ವಿಷಯ ಕುತೂಹಲ ಮೂಡಿಸಿವೆ. ಇವರೇ ಹೇಳಿದಂತೆ, ಬೆಚ್ಚಿ ಬೀಳ್ತೀರಾ, ಶಾಕ್ ಆಗ್ತೀರಾ, ಕರಗಿ ಹೋಗ್ತೀರಾ ಎಂಬ ಗಿಮಿಕ್ ಇಲ್ಲದೆ. ಸರಳ , ಸದಭಿರುಚಿಯ ಸುದ್ದಿಗಳೇ ಎಲ್ಲ ಎಂಬ ಮಾತನ್ನು ಹೇಳಿದ್ದಾರೆ.
ಒಟ್ಟಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸದೊಂದು ಭರವಸೆ ಮೂಡಿಸುವ ತಂಡ ಕನ್ನಡಿಗರ ಮುಂದೆ ಬಂದು ನಿಂತಿರುವುದು ವಿಶೇಷ. ಇದು ಬೆಳಗಾವಿ ವಾಯ್ಸ್ ವಿಶೇಷ..!