ಭೀಕರ ಆಂಬುಲೆನ್ಸ್ ಅಪಘಾತ : ಸ್ಥಳದಲ್ಲೇ ನಾಲ್ವರ ಸಾವು
ಉಡುಪಿ : ಶರವೇಗದಲ್ಲಿ ಧಾವಿಸುತ್ತಿದ್ದ ಆಂಬುಲೆನ್ಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣ ಕೊಠಡಿಗೆ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾದ ದಾರುಣ ಘಟನೆ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ಬುಧವಾರ ಸಂಜೆ ನಡೆದಿದೆ.
ಮೃತರಲ್ಲಿ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಎನ್ನುವ ಪ್ರಾಥಮಿಕ ಮಾಹಿತಿ ಇದೆ. ಗಾಯಾಳುಗಳನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.
ಹೊನ್ನಾವರದಿಂದ ಕುಂದಾಪುರದತ್ತ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಗೇಟ್ ನಿಯಂತ್ರಣ ಕೊಠಡಿಯ ಕಂಬಗಳಿಗೆ ಬಡಿದು ಮಗುಚಿ ಬಿದ್ದಿದೆ. ವೇಗವಾಗಿ ಸಾಗಿ ಬರುತ್ತಿದ್ದ ಆಂಬುಲೆನ್ಸ್ ಸಾಗಲು ಅನುಕೂಲವಾಗಲಿ ಎಂದು ಗೇಟ್ ಬಳಿ ಅಡ್ಡಲಾಗಿ ಇಟ್ಟ ಬ್ಯಾರಿಕೇಡ್ ಗಳನ್ನು ತೆರವು ಮಾಡಲು ತೆರಳಿದ್ದ ಟೋಲ್ ಗೇಟ್ ಸಿಬ್ಬಂದಿಗೂ ಅಪಘಾತದಲ್ಲಿ ಗಾಯಗಳಾಗಿದೆ.
ಅಪಘಾತದ ಭೀಕರ ದೃಶ್ಯ ಟೋಲ್ ಗೇಟ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.