ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪಗೆ ಕ್ಲೀನ್ ಚಿಟ್, ಏನು ಹೇಳಿದ್ರು ಸಂತೋಷ್ ಪತ್ನಿ ರೇಣುಕಾ
ಬೆಳಗಾವಿ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪ್ರಭಾವ ಬಳಿಸಿಕೊಂಡು ನನ್ನ ಪತಿ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಮಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಂಡು ಆರೋಪ ಮುಕ್ತರಾಗಿದ್ದಾರೆ ಎಂದು ಮೃತ ಸಂತೋಷ ಪತ್ನಿ ರೇಣುಕಾ ಪಾಟೀಲ ಆರೋಪಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದರು. 15 ದಿನದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದಿದ್ದರು. ಆಗ ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಮಾಜಿ ಸಚಿವ ಈಶ್ವರಪ್ಪನವರನ್ನು ಪೊಲೀಸ್ ತನಿಖಾಧಿಕಾರಿಗಳು ವಿಚಾರಣೆಯೇ ಮಾಡಿಲ್ಲ. ಯಾವ ಆಧಾರದ ಮೇಲೆ ಕ್ಲೀನ್ ಚಿಟ್ ನೀಡಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನ ಗಂಡ 108 ಕಾಮಗಾರಿ ಮಾಡಿದ್ದಾರೆ. ಅದನ್ನು ತನಿಖೆ ನಡೆಸಲಿಲ್ಲ. ಆಗ ಏಕೆ ಜಿಲ್ಲಾಡಳಿತ, ಜಿಪಂ ಕಣ್ಣು ಮುಚ್ಚಿ ಕುಳಿತಿತ್ತು. ಕಾಮಗಾರಿ ಮಾಡುವಾಗ ಎಂದು ಪ್ರಶ್ನಿಸಿದರು.
ನನ್ನ ಪತಿ ಸಂತೋಷ ಪಾಟೀಲ ಈಶ್ವರಪ್ಪನವರ ಹೆಸರನ್ನು ವಾಟ್ಸಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ತನಿಖೆ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿದರೂ ನಾನು ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತೇನೆ.
ಈಶ್ವರಪ್ಪನವರು 40% ಕಮಿಷನ್ ಕೇಳಿದ್ದಾರೆ. ನನ್ನ ಪತಿಗೆ ಅನ್ಯಾಯವಾಗಿದೆ. ನನ್ನ ಗಂಡ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಕೈ ಬರಹದಲ್ಲಿರಬೇಕು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆದರೆ ಸಾಯುವ ವ್ಯಕ್ತಿ ಎಂದೂ ಸುಳ್ಳು ಹೇಳುವುದಿಲ್ಲ. ಈಗ ನಾನು ನನ್ನ ಪತಿಯ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಪತ್ರದ ಮೂಲಕ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದನ್ನಾದರೂ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ರಸ್ತೆ ಕಾಮಗಾರಿ ಮಾಡಿರುವ ಹಣ ಬಿಡುಗಡೆ ಮಾಡಲು ರಾಜಕೀಯ ಷಡ್ಯಂತ್ರ ನಡೆಸಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಕಾನೂನು ಹೋರಾಟದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯೂ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.