Select Page

Advertisement

ಹರ್ ಘರ್ ತಿರಂಗಾ ಅಭಿಯಾನ : ಸಾರ್ವಜನಿಕರಿಗೆ 25 ರೂ. ನಲ್ಲಿ ಧ್ವಜ ವಿತರಣೆ

ಹರ್ ಘರ್ ತಿರಂಗಾ ಅಭಿಯಾನ : ಸಾರ್ವಜನಿಕರಿಗೆ 25 ರೂ. ನಲ್ಲಿ ಧ್ವಜ ವಿತರಣೆ

ಬೆಳಗಾವಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ “ಹರ್ ಘರ್ ತಿರಂಗಾ” ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮನೆ, ಸರಕಾರಿ ಕಚೇರಿ ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಹರ್-ಘರ್ ತಿರಂಗಾ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಾದ್ಯಂತ ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅದೇ ರೀತಿ ಜಿಲ್ಲೆಯ ಎಲ್ಲ ಮನೆಗಳು, ಸರಕಾರಿ ಕಚೇರಿಗಳು ಹಾಗೂ ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಜನಪ್ರತಿನಿಧಿಗಳು, ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಟ್ವೀಟ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಇದೇ ರೀತಿ ಬ್ಯಾನರ್, ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು, ಎಲ್ಲ ಸರಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರೂ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಭಾರತ ಸರಕಾರವು ಧ್ವಜಸಂಹಿತೆಯಲ್ಲಿ ಕೆಲ ಮಾರ್ಪಾಡು ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ಧ್ವಜಾರೋಹಣಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಧ್ವಜಾರೋಹಣಕ್ಜೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಸಾಧಕರ ಹೇಳಿಕೆಗಳನ್ನು ಪ್ರಚುರಪಡಿಸುವ ಮೂಲಕ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಎಲ್ಲೆಡೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ತಿಳಿಸಿದರು.

ಸಾರ್ವಜನಿಕರಿಗೆ ಧ್ವಜಗಳ ಪೂರೈಕೆ : ಸರಕಾರವು ಪೂರೈಸುವ ಧ್ವಜಗಳನ್ನು ಸಂಬಂಧಿಸಿದ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುವುದು. ಸಾರ್ವಜನಿಕರಿಗೆ ಧ್ವಜಗಳನ್ನು ರೂ. 25 ಗೆ ನೀಡಲಾಗುವುದು. ಪ್ರತಿ ಕುಟುಂಬಗಳಿಗೆ ಧ್ವಜಗಳನ್ನು ತಲುಪಿಸುವ ದಿಸೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Advertisement

Leave a reply

Your email address will not be published. Required fields are marked *