
ಶಾವಿಗೆ ಒಣಹಾಕಿದ್ದ ಮಲ್ಲಮ್ಮ ಕೆಲಸಕ್ಕೆ ವಾಪಸ್

ಬೆಳಗಾವಿ : ಸುವರ್ಣ ವಿಧಾನಸೌಧದ ಆವರಣದಲ್ಲಿ ಶಾವಿಗೆ ಒಣಗಿಸಿದ್ದ ಪ್ರಕರಣದಲ್ಲಿ ಕೆಲಸ ಕಳೆದುಕೊಂಡಿದ್ದ ಮಲ್ಲಮ್ಮ ಎಂಬುವವರನ್ನು ಮರಳಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಳ ಜೊತೆ ಮಾತನಾಡಿದ ಡಿಸಿ ನಿತೇಶ್ ಪಾಟೀಲ. ಶಾವಿಗೆ ಒಣಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿರಲಿಲ್ಲ. ಅವರನ್ನು ಬೇರೆಕಡೆ ಕೆಲಸಕ್ಕೆ ನೇಮಕ ಮಾಡಲಾಗಿತ್ತು. ಅದೂ ಮನೆಯಿಂದ ದೂರ ಆಗುತ್ತದೆ ಎಂಬ ಕಾರಣದಿಂದ ಮರಳಿ ಸುವರ್ಣ ವಿಧಾನಸೌಧದಲ್ಲಿ ಕೆಲಸಕ್ಕೆ ಮರಳುವಂತೆ ಹೇಳಲಾಗಿದೆ ಎಂದರು.
ಈ ಪ್ರಕರಣ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ರಾಜ್ಯಾದ್ಯಂತ ಮಲ್ಲಮಳ ಪರವಾಗಿ ಧ್ವನಿ ಎತ್ತಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಜಿಲ್ಲಾಡಳಿತ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದೆ. ಆದರೆ ಅಧಿಕಾರಿಗಳ ನಡೆ ಖಂಡಿಸಿರುವ ಸಾರ್ವಜನಿಕರು ಭದ್ರತಾ ಉಸ್ತುವಾರಿ ವಹಿಸಿಕೊಂಡ ಹಿರಿಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಷ್ಟಪಟ್ಟು ದುಡಿದು ಬದುಕುವ ಬಡವರಮೇಲೆ ಯಾಕೆ ಈ ಧರ್ಪ ಎಂದು ಪ್ರಶ್ನಿಸಿದ್ದಾರೆ.

ಸೂರು ಕಲ್ಪಿಸುವ ಭರವಸೆ : ಕಳೆದ ಹದಿಮೂರು ವರ್ಷಗಳಿಂದ ಸುವರ್ಣ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ಮಲ್ಲಮ್ಮಳಿಗೆ ಮೂರು ಮಕ್ಕಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ. ಈವರೆಗೂ ಮಲ್ಲಮ್ಮಳಿಗೆ ಇರಲು ಮನೆ ವ್ಯವಸ್ಥೆ ಕೂಡಾ ಇಲ್ಲ. ತವರುಮನೆಯವರು ನೀಡಿರುವ ಸಣ್ಣ ಕೋಣೆಯಲ್ಲಿ ಬದುಕು ನಡೆಸುತ್ತಿದ್ದು ಸೂರು ಕಲ್ಪಿಸುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಶಾವಿಗೆ ಒಣ ಹಾಕಿದ ಪ್ರಕರಣದ ಬೆನ್ನಲ್ಲೇ ಮಲ್ಲಮ್ಮಳಿಗೆ ಮನೆ ನೀರ್ಮಿಸಿಕೊಡುವಂತೆ ಸರ್ಕಾರಕ್ಕೆ ಜನಸಾಮಾನ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ, ಆದಷ್ಟು ಬೇಗ ಸೂರು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನೀಡಿದ್ದಾರೆ.
