ಬೆಳಗಾವಿ : ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಕುಟುಂಬಗಳಲ್ಲಿ ಜಾರಕಿಹೊಳಿ ಕುಟುಂಬ ಒಂದು. ಸಧ್ಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕುಟುಂಬ ಮತ್ತೊಂದು ಮೈಲುಗಲ್ಲು ಸಾಧಿಸಿದೆ.

ಹೌದು ಈ ಹಿಂದೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಂದೆ, ಮಗ, ಅಣ್ಣ – ತಮ್ಮ, ಪತಿ – ಪತ್ನಿ ಚುನಾವಣೆ ಗೆದ್ದು ಅನೇಕ ಸರ್ಕಾರಿ ಸಭೆ ಮಾಡಿರುವ ಇತಿಹಾಸ ಇದೆ. ಇದರಲ್ಲಿ ಪ್ರಮುಖವಾಗಿ ಸಹೋದರರು ಎಂದು ಬಂದರೆ, ಕತ್ತಿ ಮನೆತನ,

ಜಾರಕಿಹೊಳಿ ಮನೆತನ ಪ್ರಮುಖವಾಗಿವೆ. ಇನ್ನೂ ಪತಿ ಮತ್ತು ಪತ್ನಿ ಎಂದರೆ ಅದು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರದು. ಆದರೆ ಇದೇ ಮೊದಲಬಾರಿಗೆ ಅಪ್ಪ ಮತ್ತು ಮಗಳು ಚುನಾಯಿತ ಜನಪ್ರತಿನಿಧಿಯಾಗಿ ಸರ್ಕಾರಿ ಸಭೆ ನಡೆಸಿದ್ದು ಸಚಿವ ಸತೀಶ್ ಹಾಗೂ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಅತ್ಯಂತ ಕಿರಿಯ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭೆ ಗೆದ್ದು ಇತಿಹಾಸ ನಿರ್ಮಿಸಿದ್ದರು. ಸಧ್ಯ ತಂದೆ ಸತೀಶ್ ಜಾರಕಿಹೊಳಿ ಜೊತೆಗೆ ಕೆಡಿಪಿ ಸಭೆಯಲ್ಲಿ ಭಾಗಿಯಾಗುವ ಮೂಲಕ ಜಿಲ್ಲೆಯಲ್ಲಿ ಮೊದಲಬಾರಿಗೆ ತಂಗೆ ಹಾಗೂ ಮಗಳು ಸರ್ಕಾರಿ ಸಭೆ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ರಾಜ್ಯದಲ್ಲಿ ತಂದೆ ಹಾಗೂ ಮಗಳು ಸೇರಿ ಚುನಾವಣೆ ಗೆದ್ದ ಇತಿಹಾಸ ಬೆರಳೆಣಿಕೆಯಷ್ಟಿವೆ. ಅದರಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಕೂಡಾ. ಮೊದಲಬಾರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪ್ರಿಯಾಂಕಾ ಸಂಸದರಾಗಿ ಮೊದಲ ಕೆಡಿಪಿ ಸಭೆ ನಡೆಸಿದ್ದಾರೆ‌.

ಕುಟುಂಬ ರಾಜಕಾರಣಕ್ಕೆ ತನ್ನದೇ ವೈಯಕ್ತಿಕ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಅನೇಕರು ಸಂವಿಧಾನಿಕ ಹುದ್ದೆಯಲ್ಲಿದ್ದಾರೆ. ಸಧ್ಯ ಜಾರಕಿಹೊಳಿ ಮನೆತನದಲ್ಲಿ ಒಬ್ಬರು ಸಚಿವರು, ಇಬ್ಬರು ಶಾಸಕರು, ಒರ್ವರು ಪರಿಷತ್ ಸದಸ್ಯ ಹಾಗೂ ಓರ್ವ ಲೋಕಸಭಾ ಸದಸ್ಯರನ್ನು ಹೊಂದಿದ್ದಾರೆ‌.

ಇನ್ನೂ ಲಕ್ಷ್ಮೀ ಹೆಬ್ಬಾಳಕರ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರೆ ಅವರ ಸಹೋದರ ಚನ್ನರಾಜ ಅವರು ಪರಿಷತ್ ಸದಸ್ಯರಾಗಿದ್ದಾರೆ. ಹಾಗೆಯೆ ಚಿಕ್ಕೋಡಿಯ ಮಾಜಿ ಮಂತ್ರಿ ಪ್ರಕಾಶ್ ಹುಕ್ಕೇರಿ ಪರಿಷತ್ ಸದಸ್ಯರಾಗಿದ್ದರೆ, ಅವರ ಪುತ್ರ ಗಣೇಶ್ ಹುಕ್ಕೇರಿ ಶಾಸಕರಾಗಿದ್ದಾರೆ.

ಮಾಜಿಗಳ ಪಟ್ಟಿ ನೋಡಿದರೆ ಬೈಲಹೊಂಗಲದ ಕೌಜಲಗಿ ಮನೆತನ, ಸವದತ್ತಿ ಮಾಮನಿ ಮನೆತನ, ಹುಕ್ಕೇರಿಯ ಕತ್ತಿ ಮನೆತನ, ನಿಪ್ಪಾಣಿಯ ಜೊಲ್ಲೆ ಮನೆತನವೂ ಈ ಹಿಂದೆ ಮನೆಯಲ್ಲಿ ಒಂದೇ ಬಾರಿಗೆ ಇಬ್ಬರು ಚುನಾಯಿತ ಜನಪ್ರತಿನಿಧಿಗಳಾಗಿದ್ದರು‌.