
ಚುನಾವಣೆ ಪೂರ್ವತಯಾರಿಗೆ ಮಿಕ್ಸರ್ ಹಂಚಿದ್ರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್? – ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ನಡೆ ಎಂದ ನೆಟ್ಟಿಗರು..!

ವೀಡಿಯೊ ನೋಡಲು ಕೆಳಗಿನ ಲಿಂಕ್ ಒತ್ತಿ
ಬೆಳಗಾವಿ : ಇನ್ನೇನು ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ನಾನಾ ಬಗೆಯ ಕಸರತ್ತು ಮುಂದುವರಿಸಿದ್ದಾರೆ. ಹಾಗೆಯೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡಿರುವ ವೀಡಿಯೊ ಒಂದು ವೈರಲ್ ಆಗಿದೆ.
ಹೌದು ಈಗಾಗಲೇ ಚುನಾವಣೆ ತಯಾರಿ ನಡೆಸಿರುವ ಶಾಸಕಿ ಹೆಬ್ಬಾಳ್ಕರ್ ಮತದಾರರಿಗೆ ಆಮಿಷ ಒಡ್ಡುವುದರಲ್ಲಿ ಮುಂದಿದ್ದಾರೆ. ಸಾವಿರಾರು ಕೋಟಿ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಇವರ ಮುಖವಾಡ ಕಳಚುವ ಕೆಲವೊಂದು ವೀಡಿಯೊ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ತಲೆ ಮೇಲೆ ಮನೆ ಬಳಕೆ ಮಿಕ್ಸರ್ ಡಬ್ಬಿ ಇಟ್ಟುಕೊಂಡು ಮನೆ ಸೇರುತ್ತಿರುವ ಬಡ ಹೆಣ್ಣುಮಕ್ಕಳ ದೃಶ್ಯ ಒಂದುಕಡೆಯಾದರೆ ಮತ್ತೊಂದುಕಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಡುಗಿಸುವ ಕೆಲಸ ನಡೆಯುತ್ತಿರುವುದು ವಿಪರ್ಯಾಸ.

ಈಗಾಗಲೇ ಗ್ರಾಮೀಣ ಮತಕ್ಷೇತ್ರದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಹಲವು ಘಟನೆಗಳು ಪದೇ ಪದೇ ನಡೆಯುತ್ತಿವೆ. ಆದರೆ ರಾಜಕೀಯ ನಾಯಕರು ಮಾತ್ರ ತಾವೇ ಸರ್ವಾಧಿಕಾರಿಗಳು, ನಮ್ಮನ್ನು ಬಿಟ್ಟು ಈ ದೇಶ ನಡೆಸುವವರು ಯಾರೂ ಇಲ್ಲ ಎಂಬಂತೆ ಪೋಸು ನೀಡುತ್ತಿರುವುದು ಮಾತ್ರ ವಿಪರ್ಯಾಸ. ಒಟ್ಟಿನಲ್ಲಿ ಚುನಾವಣೆ ಗೆಲುವು ಒಂದೇ ನಮ್ಮ ಮುಖ್ಯ ಗುರಿ ಎಂಬಂತೆ ವರ್ತಿಸುತ್ತಿರುವ ನಾಯಕರನ್ನು ಯಾರು ತಡೆಯುವವರು ಇಲ್ಲವಾ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟು ಬದುಕುತ್ತಿರುವ ಸಾಮಾನ್ಯ ಜನ ಕೇಳುತ್ತಿರುವ ಪ್ರಶ್ನೆ.