Select Page

ಸ್ವಾಮಿತ್ವ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉಪಯೋಗ : ಆನಂದ ಮಾಮನಿ

ಸ್ವಾಮಿತ್ವ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉಪಯೋಗ : ಆನಂದ ಮಾಮನಿ

ಸವದತ್ತಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿ ಪತ್ರ ನೀಡುವುದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಆದ್ದರಿಂದ ಈ ಸ್ವಾಮಿತ್ವ ಯೋಜನೆಯನ್ನು ಸವದತ್ತಿ ತಾಲೂಕಿನ ಎಲ್ಲ ಹಳ್ಳಿಗಳಿಗೂ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸವದತ್ತಿ ತಾಲೂಕಿನ ಆಲದಕಟ್ಟಿ .ಕೆ.ಎಂ ಗ್ರಾಮದಲ್ಲಿ ಗುರುವಾರ  ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಆಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬರ ಆಸ್ತಿ ಪತ್ರವನ್ನು  ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಯೋಜನೆ ಮೂಲಕ ಗ್ರಾಮಗಳಲ್ಲಿರುವ ಪ್ರತಿಯೊಬ್ಬರ ಆಸ್ತಿ ಕುರಿತು ಮಾಹಿತಿ ನಮೋದಿಸಿ ಗಣಕೀಕೃತ ಆಸ್ತಿ ಪತ್ರವನ್ನು ಸಿದ್ದಪಡಿಸಿ  ವಾರಸುದಾರರಿಗೆ ನೀಡಲಾಗುತ್ತದೆ.  ಇದು ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ. ಆದ್ದರಿಂದ ಬರುವ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಈ ಸ್ವಾಮಿತ್ವ ಯೋಜನೆಯನ್ನು ವಿತ್ತರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸವದತ್ತಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಜಶೇಖರ ಹಳ್ಳೂರ ಮಾತನಾಡಿ,  ಸ್ವಾಮಿತ್ವ ಯೋಜನೆಯು ಭೂ ಮಾಪನ ಇಲಾಖೆ, ಸರ್ವೇ ಆಪ್ ಇಂಡಿಯಾ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆಯಾಗಿದೆ. ಈ ಯೋಜನೆಯಡಿ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಬರುವಂತಹ ಕೃಷಿ ಭೂಮಿ ಹೊರತುಪಡಿಸಿ ವಸತಿ ನಿವೇಶನಗಳು, ಮನೆಗಳ ಕರಾರುವಕ್ಕಾದ ಅಳತೆಯನ್ನು ಡ್ರೋನ್ ಸಹಾಯದಿಂದ ನಿರ್ವಹಿಸಿ ಗ್ರಾಮಸ್ಥರಿಗೆ ಸ್ವತ್ತು ನೋಂದಣಿ ಕಾರ್ಡ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆ ಯನ್ನು ದೇಶಾದ್ಯಂತ ಮೊದಲಿಗೆ ಪಂಚಾಯತ್ ರಾಜ್ ದಿನವಾದ ಏ.೨೪ರಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು.

ಮಹತ್ವಾಕಾಂಕ್ಷೆಯ ಯೋಜನೆಯು ಸಾರ್ವಜನಿಕರಿಗೆ ತಮ್ಮ ಆಸ್ತಿಯ ನಿಖರ ಮಾಹಿತಿ ನೀಡಲಿದ್ದು ಈ ಹಿಂದೆ ಇದ್ದಂತಹ ತೊಂದರೆಗಳು ದೂರಾಗಿವೆ. ಬ್ಯಾಂಕುಗಳಲ್ಲಿ ಆಸ್ತಿ ಪತ್ರ ನೀಡುವ ಮೂಲಕ ಸಾಲವನ್ನು ಪಡೆಯುವುದು ಸರಳವಾಗಲಿದೆ ಎಂದು ತಿಳಿಸಿದರು.

ಅಲ್ಲದೇ ಸವದತ್ತಿ ತಾಲೂಕಿನಲ್ಲಿ ಒಟ್ಟು ೧೩ ಗ್ರಾಮಗಳನ್ನು ಪ್ರಾಯೋಗಿಕವಾಗಿ  ಆಯ್ಕೆ ಮಾಡಿಕೊಂಡು, ಸ್ವಾಮಿತ್ವ ಯೋಜನೆ ಅಡಿಯಲ್ಲಿ ಸರ್ವೇ ಕಾರ್ಯ ಮಾಡಲು ಕ್ರಮಕೈಗೊಳ್ಳಲಾಗಿತ್ತು. ಈ ಪೈಕಿ  ಆಲದಕಟ್ಟಿ .ಕೆ.ಎಂ ಗ್ರಾಮ ಸವದತ್ತಿ ತಾಲೂಕಿನಲ್ಲಿಯೇ ಸ್ವಾಮಿತ್ವ ಯೋಜನೆ ಪೂರ್ಣಗೊಂಡ ಗ್ರಾಮವಾಗಿ ಹೊರಹೊಮ್ಮಿದೆ.  ಈ ಗ್ರಾಮದಲ್ಲಿ  ಸುಮಾರು ೮ ರಿಂದ ೯ ತಿಂಗಳು ಕಾಲ ೬ ಸರ್ವೇದಾರರು ಡ್ರೋನ್ ಮೂಲಕ ಸರ್ವೇ ಕಾರ್ಯ ಮಾಡಿದ್ದಾರೆ. ನಂತರ ತಂತ್ರಾಂಶದಲ್ಲಿ  ಇಬ್ಬರು ಸರ್ವೇದಾರರು ಅಳವಡಿಸುವ ಕಾರ್ಯ ಮಾಡಿದ್ದಾರೆ. ಈ ಗ್ರಾಮದಲ್ಲಿ ಸುಮಾರು ೮೦೦ ಅಧಿಕ ಆಸ್ತಿ, ಮನೆಗಳ ಸರ್ವೇ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ  ಪಂಚಾಯತ ಅಭಿವೃದ್ಧಿ ಅಧಿಕಾರಿ ಹೇಮಾ, ಪರ್ಯವೇಕ್ಷಕ ಐ.ಬಿ.ಪತ್ತಾರ, ಯರಗಟ್ಟಿ ತಹಸಿಲ್ದಾರ ಎಂ.ಎನ್.ಮಠದ, ಪಂಚಾಯತ ಅಧ್ಯಕ್ಷರು, ಸದಸ್ಯರು  ಹಾಗೈ ಗ್ರಾಮಸ್ಥರು  ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *