ಸಿಡಿ ಪ್ರಕರಣ ಹೋರಾಟ ಕೈಬಿಟ್ಟು ಮನೆತನದ ಮರ್ಯಾದೆ ಉಳಿಸಿಕೊಳ್ಳಿ – ಬಾಲಚಂದ್ರ ಜಾರಕಿಹೊಳಿ ಕಿವಿಮಾತು
ಗೋಕಾಕ್ : ಸಿಡಿ ಪ್ರಕರಣ ಮುಂದುವರಿಸುವುದರಿಂದ ಮೂರೂ ಮನೆತನಕ್ಕೆ ಕೆಟ್ಟ ಹೆಸರು ಬರುತ್ತದೆ. ದಯವಿಟ್ಟು ಇದನ್ನು ಇಲ್ಲಿಯೇ ಬಿಟ್ಟುಬಿಡಿ, ಸ್ವಂತ ಶಕ್ತಿ ಮೇಲೆ ಚುನಾವಣೆ ಎದುರಿಸೋಣ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಮೂವರು ಕಷ್ಟಪಟ್ಟು ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದಾರೆ. ಮೂರು ಕುಟುಂಬಕ್ಕೆ ಒಳ್ಳೆಯ ಹೆಸರಿದೆ. ಸಿಡಿ ಪ್ರಕರಣ ಮುಂದುವರಿಸಿದರೆ ಇದರಿಂದ ಕೆಟ್ಟ ಹೆಸರು ಬರುತ್ತದೆ. ದಯವಿಟ್ಟು ಇದನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಕಿವಿಮಾತು ಹೇಳಿದರು.
ಇದು ಚುನಾವಣೆ ಸಮಯ, ಈ ಸಂದರ್ಭದಲ್ಲಿ ಸಿಡಿ ವಿವಾದ ಒಳ್ಳೆಯದಲ್ಲ. ಅವರು ತಮ್ಮ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಎದುರಿಸಲಿ. ನಾವು ಬಿಜೆಪಿ ಪಕ್ಷದಿಂದ ಎದುರಿಸುತ್ತೇವೆ. ಜನರಿಗೆ ಯಾರ ಮೇಲೆ ನಂಬಿಕೆ ಇದೆ ಅವರನ್ನ ಆಯ್ಕೆ ಮಾಡುತ್ತಾರೆ. ಮೂವರು ಮುಖಂಡರು ನನಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದು ನಮ್ಮ ಕೆಲವು ವಿಚಾರಗಳನ್ನು ಮುಖ್ಯಮಂತ್ರಿ ಹಾಗೂ ಸಚಿವರ ಬಳಿ ಕುಳಿತು ಚರ್ಚೆ ಮಾಡಬೇಕು. ಈ ರೀತಿ ಬೀದಿಯಲ್ಲಿ ಹೇಳಿಕೆ ನೀಡುವುದರಿಂದ ನಗೆಪಾಟಲಿಗೆ ಈಡಾಗುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು.