ಬೆಳಗಾವಿ ಪತ್ರಕರ್ತರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಇಬ್ಬರು ಯೂಟ್ಯೂಬರ್ ಬಹಿರಂಗ ಕ್ಷಮಾಪಣೆ..!

ಬೆಳಗಾವಿ : ಬೆಳಗಾವಿ ಪತ್ರಕರ್ತರು ಭಯೋತ್ಪಾದಕರು ಹಾಗೆಯೇ ಯಾವುದೋ ವ್ಯಕ್ತಿ ಇವರನ್ನು ನಿಯಂತ್ರಣ ಮಾಡುತ್ತಿದ್ದಾನೆ ಎಂದು ನಾಲಿಗೆ ಹರಿಬಿಟ್ಟಿದ್ದ ಇಬ್ಬರು ಯೂಟ್ಯೂಬರ್ ಗಳು ಬಹಿರಂಗ ಕ್ಷಮೆ ಕೇಳಿದ್ದಾರೆ.
ಬೆಳಗಾವಿಯ ಇಬ್ಬರು ಸ್ವಯಂ ಘೋಷಿತ ಪತ್ರಕರ್ತರಾದ ಬಾಪುಗೌಡ ಪಾಟೀಲ್ ಹಾಗೂ ಸದಾನಂದ ಬಾಮಮೆ ಎಂಬ ಇಬ್ಬರು ಯೂಟ್ಯೂಬರ್ ಗಳು ವಿನಾಕಾರಣ ಬೆಳಗಾವಿ ಪತ್ರಕರ್ತರು ಮಾರಾಟವಾಗಿದ್ದು, ಭಯೋತ್ಪಾದಕರಿಗೆ ಸಮ ಆಗಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದರು.
ಜೊತೆಗೆ ಬೆಳಗಾವಿಯಲ್ಲಿ ನಡೆಯುವ ಎಲ್ಲಾ ಹಗರಣಗಳನ್ನು ನಾವೇ ಬಯಲಿಗೆಳೆಯುತ್ತೇವೆ. ಇನ್ನುಳಿದ ಜಿಲ್ಲೆಯ ಯಾವೊಂದು ಮಾಧ್ಯಮಗಳು ಧ್ವನಿ ಎತ್ತುವುದಿಲ್ಲ. ಒಬ್ಬ ವ್ಯಕ್ತಿ ನಿಯಂತ್ರಣದಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಪದೇ, ಪದೇ ಹೀಯಾಳಿಸುವ ಕೆಲಸ ಮಾಡುತ್ತಿದ್ದರು.
ಸಧ್ಯ ತಮ್ಮ ತಪ್ಪಿನ ಅರಿವಾದ ಹಿನ್ನೆಲೆಯಲ್ಲಿ ಇಬ್ಬರು ಯೂಟ್ಯೂಬರ್ ಗಳು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಮುಂದೆ ಈ ರೀತಿಯ ಹೇಳಿಕೆ ನೀಡುವುದಿಲ್ಲ, ಪತ್ರಕರ್ತರ ಭಾವನೆಗೆ ನೋವು ತರಿಸಿದ್ದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಜವಾಬ್ದಾರಿಯುತ ಮಾಧ್ಯಮದಲ್ಲಿರುವ ಪತ್ರಕರ್ತರು ಯಾವುದೇ ಸುದ್ದಿಯನ್ನು ಪೂರ್ವಾಪರ ಪರಾಮರ್ಶೆ ಮಾಡಿದ ನಂತರವೇ ಅದನ್ನು ಬಿತ್ತರ ಮಾಡುವ ಕೆಲಸ ಮಾಡಬೇಕಾಗುತ್ತದೆ. ಈ ಇಬ್ಬರು ಪತ್ರಕರ್ತರ ಯಾವುದೇ ಖರ್ಚು ಇಲ್ಲದೆ ಯೂಟ್ಯೂಬ್ ಚಾನಲ್ ನಡೆಸಿಕೊಂಡು ಬಾಯಿಗೆ ಬಂದಂತೆ ಮಾತನಾಡುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬೆಳಗಾವಿ ಪತ್ರಕರ್ತರಿಗೆ ತಮ್ಮದೇ ಆದ ಹಿರಿಮೆ ಇದೆ. ಇಲ್ಲಿರುವಷ್ಟು ಸುದ್ದಿ ಮಾಧ್ಯಮಗಳು, ಸ್ಥಳೀಯ ಪತ್ರಿಕೆಗಳು ಹಾಗೂ ಪತ್ರಕರ್ತರು ಬೇರೆ ಎಲ್ಲಿಯೂ ಸಿಗಲಾರರು.
ಕನ್ನಡ ನಾಡು, ನುಡಿ, ಸಂಸ್ಕೃತಿ ವಿಷಯಗಳಲ್ಲಿ ಅತ್ಯಂತ ಜಾಗರೂಕತೆಯಿಂದ ಜವಾಬ್ದಾರಿಯುತವಾಗಿ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಬೆಳಗಾವಿ ಜನರಿಗೆ ಗೊತ್ತಿರುವ ಸಂಗತಿ.
ಮಳೆ, ಬಿಸಿಲು, ಪ್ರವಾಹ ಲೆಕ್ಕಿಸದೆ ಇಲ್ಲಿನ ಪತ್ರಕರ್ತರ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದರ ಫಲವಾಗಿ ಇಂದು ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಅತ್ಯಂತ ಜನಪ್ರಿಯ ಹಾಗೂ ಸದಾಕಾಲವೂ ಸುದ್ದಿಯಲ್ಲಿರುವ ಜಿಲ್ಲೆ ಎಂಬ ಹೆಗ್ಗಳಿಗೆ ಪಡೆದುಕೊಂಡಿದೆ. ತಮ್ಮ ವೈಯಕ್ತಿಕ ತೆವಲಿಗಾಗಿ ಪ್ರಾಮಾಣಿಕ ಪತ್ರಕರ್ತರನ್ನು ಹೀಯಾಳಿಸುವುದು ನಿಲ್ಲಲಿ.

