Select Page

Advertisement

ಅರಭಾವಿ ಫೌಂಡೇಶನ್ ವತಿಯಿಂದ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮ

ಅರಭಾವಿ ಫೌಂಡೇಶನ್ ವತಿಯಿಂದ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮ

ಮುಗಳಖೋಡ : ಇವತ್ತಿನ ಯುವಕರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಫಲವತ್ತಾದ ಭೂಮಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಹೆಚ್ಚಿನ ಲಾಭದ ನಿರೀಕ್ಷೆಯಿಂದ ದೂರ ಸರಿದು ಆರೋಗ್ಯಕರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಗೋ ಆಧಾರಿತ ಕೃಷಿಕ ತುಕಾರಾಮ ಪವಾರ್ ಹೇಳಿದರು.

ದಿ. ಮಾರುತಿ ಅರಭಾವಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅರಭಾವಿ ಫೌಂಡೇಶನ್ ವತಿಯಿಂದ ಸೋಮವಾರ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸಾವಯವ ಕೃಷಿ ಜಾಗೃತಿ ಸಭೆ ಹಾಗೂ ಗೋಕೃಪಾಮೃತ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಕಯ ಕೃಷಿ ನಿರ್ದೇಶಕ ವಿನೋದ ಮಾವರ್ಕರ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೈತರು ಸಾವಯವ ಕೃಷಿಯಿಂದ ದೂರ ಸರಿಯುತ್ತಿದ್ದು ರಸಾಯನಿಕ ವಸ್ತು ಬಳಸಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಜನರ ಆರೋಗ್ಯದ ಮೇಲೆ ರಸಾಯನಿಕ ವಸ್ತುಗಳ ಬಳಕೆಯಿಂದ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಆದಷ್ಟು ಸಾವಯವ ಕೃಷಿ ಕಡೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ರೈತರು ಬೆಳೆದ ಸಾವಯವ ಬೆಳೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಕುರಿತು ರೈತರಿಗೆ ಸಾವಯವ ಕೃಷಿ ಇಲಾಖೆಯಿಂದ ಪ್ರಮಾಣಪತ್ರ ನೀಡಲಾಗುತ್ತಿದ್ದು ಇದರಿಂದ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಲಾಭದಾಯಕವಾಗುತ್ತಿದು ಎಲ್ಲರೂ ಉಪಯೋಗ ಪಡೆದುಕೊಳ್ಳಬೇಕು ಎಂದರು.‌ ಸಾವಯವ ಜಾಗೃತಿ ಕುರಿತು ಅರಭಾವಿ ಫೌಂಡೇಶನ್ ಮುಖ್ಯಸ್ಥ ಸಂತೋಷ ಅರಭಾವಿ ಮಾಡಿರುವ ಕೆಲಸ ಶ್ಲಾಘನೀಯ, ಇವರ ಸಮಾಜಪರ ಧ್ವನಿ ಇನ್ನಷ್ಟು ಗಟ್ಟಿಯಾಗಲಿ ಎಂದರು.

ಗೋ ಆಧಾರಿತ ಕೃಷಿಕ ತುಕಾರಾಮ ಪವಾರ್ ಮಾತನಾಡಿ. ಈ ಹಿಂದೆ ರಸಾಯನಿಕ ಔಷಧ ಬಳಕೆ ಮಾಡದೆ ದನಗಳ ಗೊಬ್ಬರ ಬಳಸಿ ಆರೋಗ್ಯಕರ ಕೃಷಿಗೆ ನಮ್ಮ ಪೂರ್ವಜರು ಒತ್ತು ನೀಡಿದ್ದರು. ಆದರೆ ಇಂದಿನ ಕೃಷಿ ರಾಸಾಯನಿಕ ಔಷಧ ಬಳಕೆ ಮಾಡಿ ಭೂಮಿ ಫಲವತ್ತತೆ ಹಾಳು ಮಾಡುತ್ತಿದ್ದು ನಾವು ಮಣ್ಣಿಗೆ ಮಾಡುವ ದ್ರೋಹವಾಗಿದೆ. ಆದಷ್ಟು ಸಾವಯಕ ಕೃಷಿ ಹಾಗೂ ಗೋ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಅರಭಾವಿ ಫೌಂಡೇಶನ್ ಸಂಸ್ಥಾಪಕ ಹಾಗೂ ಯುವ ಮುಖಂಡರ ಸಂತೋಷ ಅರಭಾವಿ ಮಾತನಾಡಿ. ನಮ್ಮ ತಂದೆಯವರಾದ ದಿ. ಮಾರುತಿ ಅರಭಾವಿಯವರು ಸಾವಯವ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದರು. ಸ್ವಂತ ಜಮೀನಿನಲ್ಲಿ ಸಾವಯವ ಕೃಷಿ ಮಾಡುವ ಮೂಲಕ ರೈತರಿಗೆ ಆದರ್ಶರಾಗಿದ್ದರು. ಅವರ ನೆನಪಿಗಾಗಿ ನಾವು ಸಾವಯವ ಕಾರ್ಯಾಗಾರ ಹಮ್ಮಿಕೊಂಡಿದ್ದು ಮುಂಬರುವ ದಿನಗಳಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ ಎಂದರು. 

ಲಕ್ಷ್ಮೀ ಅರಭಾವಿಯವರು ಸಾವಯವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಾವಯವ ರೈತರಿಗೆ ಗೋ ಕೃಪಾಮೃತ ವಿತರಣೆ ಹಾಗೂ ದೇಶಿ ಬೀಜಗಳ ಮೇಳ ನಡೆಯಿತು. ಈ ಸಂದರ್ಭದಲ್ಲಿ 3 ಎಫ್ ಆಯಿಲ್  ಪಾಮ್ ಅಧಿಕಾರಿ ಜಿ ಎಮ್ ನಧಾಪ್, ಪ್ರಗತಿಪರ ಸಾವಯವ ಕೃಷಿಕ ಸಾವಂತ ನಾಯಿಕ್, ರೈತರಾದ ಈಶ್ವರ ಮೋಳೆ, ಶಿವಲಿಂಗ ಹುಕ್ಕೇರಿ, ವಿಶ್ವವಾಣಿ ಜಿಲ್ಲಾ ವರದಿಗಾರ ವಿನಾಯಕ ಮಠಪತಿ, ಶ್ರೀಧರ ಪೂಜೆರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಲಕ್ಷಣ ಮುನ್ಯಾಳ್ ನಿರೂಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!