ಶ್ರೀಶೈಲದಲ್ಲಿ ಗಲಾಟೆ : ವದಂತಿಗಳಿಗೆ ಕಿವಿಗೊಡಬೇಡಿ -SP ರೆಡ್ಡಿ
ಬೆಳಗಾವಿ : ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಹಾಗೂ ಆಂಧ್ರದ ಜನರ ನಡುವೆ ಗಲಾಟೆಯಯಲ್ಲಿ ಯಾರೂ ಮೃತಪಟ್ಟಿಲ್ಲ. ಕರ್ನಾಟಕದ ಭಕ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಗಲಾಟೆ ಕುರಿತಾಗಿ ಮಾಹಿತಿ ನೀಡಿರುವ ಇವರು. ಬಾಗಲಕೋಟೆ ಜಿಲ್ಲೆಯ ಒಬ್ಬರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಸುಳ್ಳು. ಈ ರೀತಿಯಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಎರಡು ಬಣಗಳ ನಡುವೆ ನಡೆದ ಗಲಾಟೆಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಕನ್ನಡಿಗರು ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಕನ್ನಡಿಗರ ರಕ್ಷಣೆಗೆ ನಾನು ಸದಾಕಾಲವೂ ಸಿದ್ದನಾಗಿದ್ದು, ಆಂದ್ರಪ್ರದೇಶದ ಸರ್ಕಾರ ಹಾಗೂ ಡಿಜಿಪಿ ಕರ್ನಾಟಕ ಭಕ್ತರಿಗೆ ರಕ್ಷಣೆ ನೀಡಲು ಸೂಚನೆ ನೀಡಿದ್ದು ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. 2018 – 19 ರಲ್ಲಿ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಿದ್ದರು.
ಕುಡಿವ ನೀರಿನ ಬಾಟಲಿ ವಿಚಾರಕ್ಕೆ ಉಂಟಾದ ಜಗಳದಲ್ಲಿ ಆಂಧ್ರ ಮೂಲದ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ. ಲಾಠಿ ಹಾಗೂ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರ ಮೇಲೆ ಹಲ್ಲೆ ನಡೆದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.