ಬೆಳಗಾವಿ : ದೇವಸ್ಥಾನದ ಅರ್ಚಕರು ಸಮಯಕ್ಕೆ ಹೆಚ್ಚು ಒತ್ತು ನೀಡಿ ದೇವಸ್ಥಾನದ ಪೂಜೆ ಪುನಸ್ಕಾರ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭಾನುವಾರ ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕದ ಸಹಯೋಗದಲ್ಲಿ ಅರ್ಚಕರ ತರಬೇತಿ ಶಿಬಿರದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಹಿಂದುಗಳು ಕೂಡಿ ಕಾರ್ಯ ಮಾಡಿದರೆ ದೇಶ ಸುಭದ್ರವಾಗಿ ಇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅರ್ಚಕರು ದೇವಸ್ಥಾನದ ಪೂಜೆಯ ಜೊತೆಗೆ ದೇಶದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದರು.

ಹಿಂದು ಧರ್ಮ ಹಾಗೂ ನಮ್ಮ ಸನಾತನ ಧರ್ಮದ ಬಗ್ಗೆ ಎಲ್ಲ ಅರ್ಚಕರು ತಿಳಿದುಕೊಂಡು ಸಮಾಜ ಸೇವೆ ಮಾಡಬೇಕು. ದೇವಸ್ಥಾನಗಳ ಮನುಷ್ಯನ ಮನಸ್ಥಿತಿ ತಿಳಿಗೊಳಿಸುವ ಶಕ್ತಿ ಇದೆ ಎಂದರು.

ಇಸ್ಕಾನ್ ನಿರಂಜನಾ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಲು ಅರ್ಚಕರ ತರಬೇತಿ ಶಿಬಿರಗಳು ಆಯೋಜಿಸುವುದು ಅತ್ಯವಶ್ಯಕವಾಗಿದೆ. ಇಂಥ ಕಾರ್ಯಕ್ರಮವನ್ನು ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿರವುದು ಎಲ್ಲ ಅರ್ಚಕರಿಗೆ ಸಹಾಯವಾಗಲಿದೆ ಎಂದರು.

ಅರ್ಚಕರಾಗುವುದು ಬಹಳ ಕಡಿಮೆ ಇದೆ‌. ಎಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಅರ್ಚಕರನ್ನು ಬೆಳೆಸುವ ಕೆಲಸ ನಿರಂತರವಾಗಿ ಮಾಡಬೇಕು. ಭಗವಂತ ಸೇವೆ ಮಾಡಿದರೆ ನಮ್ಮ ಅಂಥಕರಣ ಶುದ್ಧಿಯಾಗಿರುತ್ತದೆ ಎಂದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಅಧ್ಯಕ್ಷ ಮನೋಹರ ಮಠದ ಮಾತನಾಡಿ, ಕಳೆದ ಎರಡುವರೆ ವರ್ಷದ ಹಿಂದೆ ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಉದಯವಾಗಿದೆ. ವೇದ ಆಗಮನದ ಅರ್ಚಕರಿಗೆ ಮಾಹಿತಿ ಇಲ್ಲ ಎಂದು ದೋಷ ಸರಿ ಇಲ್ಲ ಎಂದು ದೂಷಿಸುವ ಬದಲು ಸ್ವಾಮೀಜಿಗಳ ನೇತೃತ್ವದಲ್ಲಿ ಶಿಬಿರ ಆಯೋಜಿಸಿ ಅವರಿಗೆ ಅರ್ಚಕರ ಮಹತ್ವದ ಬಗ್ಗೆ ಆತ್ಮವಿಶ್ವಾಸದ ಶಿಬಿರವನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.

ಅರ್ಚಕರ ಶಿಬಿರದಲ್ಲಿ ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ತರಬೇತಿ ನೀಡಿ ಉತ್ತರ ಕರ್ನಾಟಕದಲ್ಲಿ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದಲ್ಲಿ ಅರ್ಚಕರಿಗೆ ಗುಣಮಟ್ಟದ ತರಬೇತಿ ನೀಡಲಾಗಿದೆ ಎಂದರು.

ದೇವಸ್ಥಾನ ಎಲ್ಲ ಜನರ ಜೀವನಾಡಿಯಾಗಿವೆ. ಇವತ್ತಿನ ದೇಶದಲ್ಲಿ ಜನರಿಗೆ ಬೇಕಾದ ದೇವಸ್ಥಾನವಾಗಬೇಕು. ಸಮಾಜದಲ್ಲಿ ಅರ್ಚಕರು ಸಮಾಜವನ್ನು ಸದೃಢವಾಗಿ ಕೊಂಡೊಯ್ಯಲು ಕೆಲಸ ಮಾಡಬೇಕು ಎಂದರು.
ಶಿಬಿರದಲ್ಲಿ ಭಾಗಿಯಾದ ಅರ್ಚಕ ಬಸವರಾಜ ನೇಸರಗಿ ಮಾತನಾಡಿ, ಇದೇ ಮೊದಲ ಬಾರಿಗೆ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕದ ಸಹಯೋಗದಲ್ಲಿ ಅರ್ಚಕರ ತರಬೇತಿ ಶಿಬಿರದಲ್ಲಿ ಎಲ್ಲ ಸಮುದಾಯದ ಅರ್ಚಕರಿಗೆ ತಾಯಿ ಪ್ರೀತಿ ಹಾಗೆ ಪ್ರೋತ್ಸಾಹ ನೀಡಿ ಸನಾತನ ಹಿಂದು ಧರ್ಮ ಕಾಪಾಡುವುದು ಹಾಗೂ ದೇವರು ಮತ್ತು ಭಕ್ತರ ನಡುವೆ ಸಂಪರ್ಕ ಕೊಂಡಿಯಾಗಿ ಸೇವೆ ಮಾಡಬೇಕು ಎಂಬ ಮಾರ್ಗದರ್ಶನ ನೀಡಿದ್ದಾರೆ ಎಂದರು.

ನಿಡಸೋಸಿಯ ಶ್ರೀನಿಜಲಿಂಗೇಶ್ವರ ಸ್ವಾಮೀಜಿ, ಶ್ರೀ ಜಗದ್ಗುರು ಡಾ. ಪವಾಡ ಬಸವೇಶ್ವರ ಸ್ವಾಮೀಜಿ, ಶ್ರೀ ಉದ್ದವನಂದ ದಾಸ್, ಶ್ರೀ ಬ್ರಹ್ಮಾನಂದ ಸ್ವಾಮಿಜಿ, ಶ್ರೀ ರವಿಶಂಕರ ಸ್ವಾಮಿಜಿ, ಶ್ರೀ ಓಂಕಾರ್ ಹರಿದಾಸ್ ಇಸ್ಕಾನ್ ಬೆಳಗಾವಿ, ವೀರೇಶ ಬಸಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.