
ರಾಮದುರ್ಗ ಕಾಂಗ್ರೆಸ್ ಗೆ ಅಶೋಕ ಅನಿವಾರ್ಯ? ಸಿದ್ದು ಆಪ್ತನ ವಿರುದ್ಧ ಮುಖಂಡರ ಬಂಡಾಯ!

ಬೆಳಗಾವಿ : ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಅಶೋಕ್ ಪಟ್ಟಣ ಪ್ರತಿನಿಧಿಸುವ ರಾಮದುರ್ಗ ಮತಕ್ಷೇತ್ರದಲ್ಲಿ ಸಧ್ಯ ಕಾಂಗ್ರೆಸ್ ಟಿಕೆಟ್ ಪೈಪೋಟಿ ಜೋರಾಗಿದೆ. ಒಂದುಕಡೆ ಮಾಜಿ ಶಾಸಕ ಅಶೋಕ್ ಪಟ್ಟಣ ಅವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಲೆಕ್ಕಾಚಾರ ಹಾಕಿದರೆ ಅತ್ತ ಸ್ಥಳೀಯ ಮುಖಂಡರು ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಸಧ್ಯ ರಾಮದುರ್ಗದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಮುಂಬರುವ ಚುನಾವಣೆ ಭರ್ಜರಿ ತಯಾರಿ ಸಹ ನಡೆದಿದೆ. ಆದರೆ ರಾಮದುರ್ಗ ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ಯಾವುದೇ ಕಾರಣಕ್ಕೂ ಅಶೋಕ್ ಪಟ್ಟಣ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಸ್ವತ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದರು ಯಾವುದೇ ಪ್ರಯೋಜನ ಕಂಡುಬಂದಿಲ್ಲ.
ಕಳೆದ ಚುನಾವಣೆಯಲ್ಲಿ ಅಶೋಕ್ ಪಟ್ಟಣ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿಯ ಮಹಾದೇವಪ್ಪ ಯಾದವಾಡ ವಿರುದ್ಧ 2875 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆದರೆ ಸ್ಥಳೀಯ ಮಟ್ಟದ ಕಾರ್ಯಕರ್ತರ ಜೊತೆ ಉತ್ತಮ ಒಡನಾಟ ಹೊಂದಿರುವ ಇವರು ಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಂಡಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾದ ಹಿನ್ನೆಲೆ ಕಾಂಗ್ರೆಸ್ ಹಾಗೂ ಅಶೋಕ್ ಪಟ್ಟಣ ಇಬ್ಬರಿಗೂ ತಲೆನೋವಾಗಿ ಪರಿಣಮಿಸಿದೆ.
ಸಿದ್ದರಾಮಯ್ಯ ಸಂಧಾನಕ್ಕೆ ಯತ್ನ : ಸಚಿವ ಎಂಟಿಬಿ ನಾಗರಾಜ್ ಅವರ ಹತ್ತಿರದ ಸಂಬಂಧಿ ಚಿಕ್ಕರೇವಣ್ಣ ಎಂಬುವವರು ಕಳೆದ ಎರಡು ವರ್ಷಗಳಿಂದ ರಾಮದುರ್ಗ ಕ್ಷೇತ್ರದಲ್ಲಿ ಹೆಚ್ಚಿನ ಓಡಾಟ ನಡೆಸಿದ್ದಾರೆ. ಜೊತೆಗೆ ಕೊವಿಡ್ ಸಂದರ್ಭದಲ್ಲಿ ಜನರಿಗಾಗಿ ಕೋಟ್ಯಾಂತರ ರೂ. ಖರ್ಚುಮಾಡಿ ಸಮಾಜಸೇವೆಯಲ್ಲಿ ತೊಡಗಿದ್ದರು. ಈ ಭಾರಿ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದ ಇವರಿಗೆ ಸಿದ್ದರಾಮಯ್ಯ ಚುನಾವಣೆ ಸ್ಪರ್ಧಿಸುವುದು ಬೇಡ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಒಳ್ಳೆಯ ಸ್ಥಾನ ನೀಡುವ ಭರವಸೆ ನೀಡಿದ್ದು ಅಶೋಕ್ ಪಟ್ಟಣ ಅವರ ಹಾದಿ ಸುಗಮಗೊಳಿಸಲು ಸಿದ್ದರಾಮಯ್ಯ ಯತ್ನಿಸಿದ್ದಾರೆ.
ಪಟ್ಟಣ ವಿರುದ್ಧ ಸ್ಥಳೀಯ ನಾಯಕರ ಆಕ್ರೋಶ : ಇನ್ನೂ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಮುಖಂಡರಾದ ಕೆಪಿಸಿಸಿ ಸದಸ್ಯ ರಾಜೇಂದ್ರ ಪಾಟೀಲ್, ಸಿ.ಬಿ ಪಾಟೀಲ್, ಅರ್ಜುನ್ ಗುಡ್ಡದ್ ಮೂವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ಅಶೋಕ್ ಪಟ್ಟಣ ಅವರಿಗೆ ನೀಡದಂತೆ ಒತ್ತಡ ಹೇರುತ್ತಿದ್ದು ಒಂದುವೇಳೆ ಅವರಿಗೆ ಟಿಕೆಟ್ ನಿಡಿದ್ದೇ ಆದರೆ ಬಂಡಾಯ ಸ್ಪರ್ಧೆ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಾಜಿ ಶಾಸಕ ಅಶೋಕ್ ಪಟ್ಟಣ ಅವರಿಗೆ ತಕೆನೋವಾಗಿ ಪರಿಣಮಿಸಿದೆ.
ಬಂಡಾಯ ಶಮನಕ್ಕೆ ಯತ್ನಿಸುವರಾ ಮಾಜಿ ಸಿಎಂ ಸಿದ್ದರಾಮಯ್ಯ : ತಮ್ಮ ಪರಮ ಆಪ್ತ ಅಶೋಕ್ ಪಟ್ಟಣ ಅವರಿಗೆ ಟಿಕೆಟ್ ಕೊಡಿಸುವ ಚಿಂತನೆಯಲ್ಲಿರುವ ಸಿದ್ದರಾಮಯ್ಯ ಕ್ಷೇತ್ರದ ಬಂಡಾಯ ಶಮನ ಮಾಡುತ್ತಾರಾ ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ಕೆಲಸ ಮಾಡಿದರೆ ಮಾತ್ರ ಕ್ಷೇತ್ರ ಕೈ ವಶ ಮಾಡಿಕೊಳ್ಳುವ ಸಂಭವ ಇದ್ದು ಬಂಡಾಯದ ಬಿಸಿ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.
***************
ಈಗಾಗಲೇ ರಾಮದುರ್ಗ ಕ್ಷೇತ್ರದ ಹಲವು ಟಿಕೆಟ್ ಆಕಾಂಕ್ಷಿಗಳು ನನ್ನನ್ನು ಸಂಪರ್ಕಿಸಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರದಲ್ಲಿ ಯಾರು ಪ್ರಭಲ ಅಭ್ಯರ್ಥಿ ಎಂಬುದನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನಿರ್ಧರಿಸುತ್ತಾರೆ. ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್
ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ