ಶೇಗುಣಸಿ ವಿರಕ್ತಮಠದಲ್ಲಿ ಅಮೃತ ಮಹೋತ್ಸವ ಹಾಗೂ ಡಾ.ಮಹಾಂತ ದೇವರ ಚರಪಟ್ಟಾಧಿಕಾರ ಸಮಾರಂಭದ
ಅಥಣಿ : ವೀರಶೈವ ಲಿಂಗಾಯತ ಮಠಗಳ ಪರಂಪರೆ ಮತ್ತು ಸಂಸ್ಕೃತಿ ಕರ್ನಾಟಕದಲ್ಲಿ ಹೆಚ್ಚಾಗಿದೆ. ಈ ಮಠಗಳು ಶರಣ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿವೆ. ಭಾವೈಕ್ಯತೆ ಮತ್ತು ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಮೂಲಕ ತ್ರಿವಿಧ ದಾಸೋಹ ಮಾಡುತ್ತಿವೆ ಎಂದು ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಅವರು ಸೋಮವಾರ ತಾಲೂಕಿನ ಶೇಗುಣಸಿ ವಿರಕ್ತಮಠದ ಶಂಕರ ಮಹಾಸ್ವಾಮಿಗಳ ಅಮೃತಮಹೋತ್ಸವ ಹಾಗೂ ಡಾ. ಮಹಾಂತ ದೇವರು ಅವರ ನಿರಂಜನ ಚರಪಟ್ಟಾಧಿಕಾರ ಸಮಾರಂಭದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಸುಕ್ಷೇತ್ರ ಶೇಗುಣಸಿಯ ವಿರಕ್ತಮಠದ ಬಸವಾದಿ ಪ್ರಮಥರ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಶ್ರೀಮಠದ ಗುರುಶಿಷ್ಯ ಪರಂಪರೆಯನ್ನು ಮುನ್ನಡೆಸಿದ ಶ್ರೀ ಶಂಕರ ಮಹಾಸ್ವಾಮೀಜಿ ಅವರು ತ್ರಿಕಾಲ ಲಿಂಗಪೂಜಾ ನಿಷ್ಠರು, ಸದಾಚಾರ ಸದ್ವಿಚಾರ ಸಂಪನ್ನರು. ಶಿಕ್ಷಣ ಪ್ರೇಮಿಗಳಾಗಿ ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು. ಅಂತಹ ಶ್ರೀಗಳು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಆನಂದ ಮತ್ತು ಅಭಿಮಾನದ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುವ ಯುವಯತಿಗಳಾದ ಡಾ. ಮಹಾಂತ ದೇವರು ಅವರಿಗೆ ನಿರಂಜನ ಚರಪಟ್ಟಾಧಿಕಾರ ಸಮಾರಂಭ ಜರುಗುತ್ತಿರುವುದು ಅತ್ಯಂತ ಆನಂದದ ಸಂಗತಿಯಾಗಿದೆ. ಶ್ರೀಮಠದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವುಳ್ಳ ಮತ್ತು ಇತ್ತೀಚಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಪಿ ಎಚ್ ಡಿ ಪದವಿಯನ್ನು ಸಂಪಾದಿಸಿರುವ ಪೂಜ್ಯರು ಶೇಗುಣಸಿ ವಿರಕ್ತಮಠದ ಸದ್ಭಕ್ತರ ಭರವಸೆಯ ಬೆಳಕಾಗಿದ್ದಾರೆ. ಅವರ ನಿರಂಜನ ಚರಪಠಾದಿಕಾರ ಸಮಾರಂಭ ಅತ್ಯಂತ ವಿಧಾಯಕ ವಾಗಿ ಮತ್ತು ವಿನೂತನವಾಗಿ ಆಚರಿಸಲು ಗ್ರಾಮದ ಹಿರಿಯರು ಮತ್ತು ಸದ್ಭಕ್ತರು ಸನ್ನದ್ಧವಾಗಿದ್ದು, ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿರುವ ಶೇಗುಣಸಿ ವಿರಕ್ತಮಠದ ಉತ್ತರಾಧಿಕಾರಿ ಪೂಜ್ಯ ಡಾ. ಮಹಾಂತ ದೇವರು ಮಾತನಾಡಿ ಮಹಾತಪಸ್ವಿ ಲಿಂ. ಮುರುಗೇಂದ್ರ ಮಹಾಸ್ವಾಮಿಗಳು ವಿರಕ್ತಮಠದ 10ನೇ ಪೀಠಾಧಿಪತಿಗಳಾಗಿ ಶ್ರೀಮಠದ ಘನತೆ ಗೌರವಗಳನ್ನು ವಿಸ್ತಾರಗೊಳಿಸಿದ್ದಾರೆ. ಅವರ ಪರಮ ಶಿಷ್ಯರಾಗಿ ಶ್ರೀ ಶಂಕರ ಮಹಾಸ್ವಾಮೀಜಿಯವರು ಶ್ರೀಮಠದ ಭವ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರು ಈಗ 75 ವಸಂತಗಳನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಅತ್ಯಂತ ಅಭಿಮಾನದಿಂದ ಆಚರಿಸುವ ಸಂಕಲ್ಪ ಹೊಂದಿದ್ದೇವೆ. ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಏಪ್ರಿಲ್ 3ರಿಂದ ಮೇ 4 ರವರಿಗೆ ಒಂದು ತಿಂಗಳ ಪರ್ಯಂತ ಬಸವ ಪುರಾಣ ಜರುಗಲಿದೆ. ನೂತನವಾಗಿ ನಿರ್ಮಿಸಿದ ಶ್ರೀಮಠದ ಕಳಸಾರೋಹಣ, ಶ್ರೀ ಮುರುಘೇಂದ್ರ ಸ್ವಾಮೀಜಿ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವ, ಸಾವಯುವ ಕೃಷಿ ಉತ್ತೇಜನಕ್ಕಾಗಿ ಕೃಷಿ ಸಮ್ಮೇಳನ, ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸಮಾವೇಶ, ಧರ್ಮ ಜಾಗೃತಿಗಾಗಿ ಅಥಣಿಯಿಂದ ಶೇಗುಣಸಿ ಶ್ರೀಮಠದವರಿಗೆ ಬೃಹತ್ ದ್ವಿಚಕ್ರ ವಾಹನಗಳ ಮೆರವಣಿಗೆ ಮೂಲಕ ಬಸವ ಜ್ಯೋತಿ ಸ್ವಾಗತಿಸುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ಶ್ರೀಮಠದ ಸದ್ಭಕ್ತರು, ಗುರುಹಿರಿಯರು ತನು ಮನ ಧನಗಳೊಂದಿಗೆ ಸಹಾಯ-ಸಹಕಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮಠದ ಶಂಕರ ಮಹಾಸ್ವಾಮೀಜಿ, ಮಾಜಿ ಜಿ.ಪಂ ಸದಸ್ಯರಾದ ಶ್ರೀಶೈಲ ನಾರಗೊಂಡ, ತಮ್ಮಣ್ಣಪ್ಪ ತೇಲಿ, ರೈತ ಮುಖಂಡ ಶಿವರಾಯ ಯಲಡಗಿ, ಪರಗೌಡ ರಾಚಪ್ಪನವರ, ವೆಂಕಪ್ಪ ಬನ್ನಿಕೊಪ್ಪ, ಕುಮಾರ ಸತ್ತಿಗೌಡರ, ಅಶೋಕ ತಮ್ಮಣ್ಣವರ, ಲಕ್ಷ್ಮಣ ಆಲೂರ, ಶಿವಾನಂದ ಸಸಾಲಟ್ಟಿ ಇನ್ನಿತರರು ಉಪಸ್ಥಿತರಿದ್ದರು.