
ಉದ್ಯಮಿ ಕೊಲೆ ಪ್ರಕರಣ : ಬನ್ನಂಜೆ ರಾಜಾ ಸೇರಿ 9 ಜನ ಆರೋಪಿಗಳು ದೋಷಿ

ರಾಜ್ಯದ ಮೊದಲ ಕೋಕಾ ನ್ಯಾಯಾಲಯ ಆದೇಶ ಪ್ರಕಟ
ಬೆಳಗಾವಿ : ಅಂಕೋಲಾ ಉದ್ಯಮಿ ಆರ್ ಎನ್ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ ನ್ಯಾಯಾಲಯ ತೀರ್ಪು ಬುಧವಾರ ಪ್ರಕಟವಾಗಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಜನ ಆರೋಪಿಗಳು ದೋಷಿ ಎಂದು ನ್ಯಾಯಾಲಯ ಆದೇಶ ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ.
ಬುಧವಾರ ಮಧ್ಯಾಹ್ನ ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಅಂಕೋಲಾ ಮೂಲದ ಉದ್ಯಮಿ ಆರ್ ಎನ್ ನಾಯಕ ಕೊಲೆ ಪ್ರಕರಣ ಸಂಬಂಧಿಸಿದಂತೆ ನ್ಯಾಯಾದೀಶ ಸಿ.ಎಂ ಜೋಶಿ ತೀರ್ಪು ನೀಡಿದ್ದು. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 16 ಜನರ ವಿರುದ್ದ ದಾಖಾಲಾಗಿದ್ದ ಪ್ರಕರಣದಲ್ಲಿ ಮೂವರ ಪಾತ್ರ ಕಂಡುಬರದ ಹಿನ್ನೆಲೆಯಲ್ಲಿ ಇವರನ್ನು ನಿರ್ದೋಷಿ ಎಂದು, ಉಳಿದ ಒಂಬತ್ತು ಜನರು ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ ಬರುವ ಏಪ್ರಿಲ್ 4 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವದಾಗಿ ಹೇಳಿದೆ.

ಕೋರ್ಟ್ ನೀಡಿರುವ ಮಹತ್ವದ ಆದೇಶದಲ್ಲಿ 6, 11 ಹಾಗೂ 16ನೇ ಆರೋಪಿಗಳನ್ನು ನಿರ್ದೋಷಿ ಎಂದು ಹೇಳಿದೆ. ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11ನೇ ಆರೋಪಿ ಬೆಂಗಳೂರಿನ ಮಹ್ಮದ್ ಶಾಬಂದರಿ ಹಾಗೂ 16ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ್ ನಾಯಕ್ ಈ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಇನ್ನೂ ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ.ಇಸ್ಮಾಯಿಲ್, ಏಳನೇ ಆರೋಪಿ ಹಾಸನದ ಮಹೇಶ ಅಚ್ಛಂಗಿ, ಎಂಟನೇ ಆರೋಪಿ ಕೇರಳದ ಸಂತೋಷ ಎಂ.ಬಿ, ಒಂಬತ್ತನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ, ಹತ್ತನೇ ಆರೋಪಿ ಬೆಂಗಳೂರಿನ ಜಗದೀಶ್ ಚಂದ್ರರಾಜ್, 12 ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ್ ಕಶ್ಯಪ್ ದೋಷಿಗಳೆಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಘಟನೆ ಹಿನ್ನೆಲೆ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಆರ್ ಎನ್ ನಾಯಕ ಅದಿರು ಉದ್ಯಮಿಯಾಗಿದ್ದರು. ಅಷ್ಟೇ ಅಲ್ಲದೆ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಭೂಗತ ಪಾತಕಿ ಬನ್ನಂಜೆ ರಾಜಾ ಆರ್ ಎನ್ ನಾಯಕ ಅವರ ಬೆನ್ನುಬಿದ್ದ. ಮೂರು ಕೋಟಿ ರೂ. ಹಪ್ತಾ ನೀಡಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುವ ಕೆಲಸವನ್ನು ವಿದೇಶದಲ್ಲಿ ಕುಳಿತುಕೊಂಡೇ ಮಾಡುತ್ತಿದ್ದ.

ಬನ್ನಂಜೆ ರಾಜಾ ಕೊಟ್ಟ ಕಿರುಕುಳಕ್ಕೆ ಬೇಸತ್ತು ಆರ್ ಎನ್ ನಾಯಕ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಯಾವಾಗ ಆರ್ ಎನ್ ನಾಯಕ ಹಣ ನೀಡುವುದಿಲ್ಲ ಎಂದು ತಿಳಿಯಿತು 2013 ರ ಡಿಸೆಂಬರ್ 21 ರಂದು ಉತ್ತರ ಪ್ರದೇಶ ಮೂಲದ ಶಾರ್ಪ್ ಶೂಟರ್ ವಿವೇಕ ಉಪಾಧ್ಯಾಯ ಎಂಬ ಆರೋಪಿ ಆರ್ ಎನ್ ನಾಯಕ ಅವರನ್ನು ಗುಂಡಿಟ್ಟು ಕೊಲೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಆರ್ ಎನ್ ನಾಯಕ ಅಂಗರಕ್ಷಕ ರಮೇಶ್ ಗೌಡ ಎಂಬುವವರು ವಿವೇಕ ಉಪಾಧ್ಯಾಯನನನ್ನು ಅಟ್ಟಿಸಿಕೊಂಡು ಗುಂಡಿಕ್ಕಿ ಕೊಲೆ ಮಾಡುತ್ತಾನೆ. ಈ ಕುರಿತಾಗಿ ಬನ್ನಂಜೆ ರಾಜಾ ಕೊಲೆ ಮಾಡಿಸಿದ್ದು ನಾನೇ ಎಂದು ಹೇಳಿಕೊಳ್ಳುತ್ತಾನೆ. ನಂತರ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ.

ರಾಜ್ಯದ ಮೊದಲ ಕೋಕಾ ಪ್ರಕರಣ : ಅಂಕೋಲದಲ್ಲಿ 2013ರ ಡಿ. 21ರಂದು ನಡೆದಿದ್ದ ಸಹಕಾರಿ ಧುರೀಣ ಆರ್.ಎನ್. ನಾಯಕ ಹತ್ಯೆ ಪ್ರಕರಣದ ಏಳು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಿಗಳ ನಿಯಂತ್ರಣ ಕಾಯಿದೆ 2002 (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕೋಕಾ ಅಡಿಯಲ್ಲಿ ದಾಖಲಾದ ರಾಜ್ಯದ ಮೊದಲ ಪ್ರಕರಣ ಇದಾಗಿತ್ತು. ಐಪಿಸಿ ಸೆಕ್ಷನ್ 302, 307, 355, 212, 121ಬಿ ಹಾಗೂ ಭಾರತೀಯ ಶಸ್ತ್ರ ಕಾಯಿದೆ 325, 327, 327 ಸಿ ಪ್ರಕಾರ ಕೇಸು ದಾಖಲಿಸಲಾಗಿದೆ. ಈ ಕಾಯಿದೆ ಮೂಲಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸುವ ಅವಕಾಶ ಈ ಕಾಯ್ದೆಯಲ್ಲಿ ತರಲಾಗಿದೆ.
ಹಿರಿಯ ಅಧಿಕಾರಿಗಳು ಸಾಕ್ಷಿ ನೀಡಿದ್ದ ಪ್ರಕರಣ : ಬರೋಬ್ಬರಿ 9 ವರ್ಷಗಳ ಹಿಂದೆ ನಡೆದಿದ್ದ ಉದ್ಯಮಿ ಆರ್ ಎನ್ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೊದಲ ಕೋಕಾ ನ್ಯಾಯಾಲಯ ತೀರ್ಪು ಪ್ರಕಟವಾಗಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕ ಮಠ, ಹಾಗೂ ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ್ ಆಲ್ವಾ
ವಕಾಲತ್ತು ವಹಿಸಿದ್ದ ಈ ಪ್ರಕರಣದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 210 ಜನರು ಸಾಕ್ಷಿ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ ಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಣ್ಣಾ ಮಲೈ ಸಾಕ್ಷಿ ನುಡಿದಿದ್ದರು.

ಪ್ರಕರಣದ ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ ಕಳೆದ 8 ವರ್ಷಗಳಿಂದ ಜೈಲಿನಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಪೂರಕ ಸಾಕ್ಷ್ಯ ಇಲ್ಲದ ಕಾರಣ ಇವರನ್ನು ನಿರಪರಾಧಿ ಎಂದು ಕೋರ್ಟ್ ಆದೇಶ ನೀಡಿದೆ. ತನಿಖಾ ಅಧಿಕಾರಿಯ ತಪ್ಪಿನಿಂದ ಒಬ್ಬ ನಿರಪರಾಧಿ ಸುಮಾರು ಎಂಟು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನ್ನು ಪ್ರಶ್ನಿಸಿ ಅಧಿಕಾರಿಗೆ ಶಿಕ್ಷೆ ನೀಡುವಂತೆ ಮೇಲ್ಮನವಿ ಸಲ್ಲಿಸುತ್ತೇವೆ.
ನಿರಪರಾಧಿ ರಬ್ದಿನ್ ಫಿಚೈ ಪರ ವಕೀಲ

ಕೋಕಾ ನ್ಯಾಯಾಲಯದಲ್ಲಿ 210 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಕೃತ್ಯಕ್ಕೆ ಬಳಿಸಿದ್ದ ವಾಹನ, ಪೋನ್, ಗನ್ ಗಳನ್ನ ಸಹ ಕೋರ್ಟ ಮುಂದೆ ಪೊಲೀಸರು ಹಾಜರು ಪಡಿಸಿದ್ದರು. ಇಂದು ಸಂಪೂರ್ಣ ವಾದ ಪ್ರತಿವಾದದ ಬಳಿಕ ಬೆಳಗಾವಿ ಕೋಕಾ ನ್ಯಾಯಾಲಯವು 700 ಪುಟಗಳ ತೀರ್ಪು ನೀಡಿದೆ, 9 ಜನ ಆರೋಪಿಗಳ ಶಿಕ್ಷೆ ಪ್ರಮಾಣವನ್ನ ಕಾಯ್ದಿರಿಸಿದೆ. ಇದು ದೊಡ್ಡ ಗೆಲುವಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆ ನ್ಯಾಯಾಲಯ ನೀಡುವ ವಿಶ್ವಾಸವಿದೆ.
ಕೆ.ಜಿ. ಪುರಾಣಿಕಮಠ
ಸರ್ಕಾರದ ಪರ ವಿಶೇಷ ಅಭಿಯೋಜಕ