ರಾಷ್ಟ್ರೀಯ ಪಕ್ಷಗಳಿಂದ ಸಿಂದಗಿ ಕ್ಷೇತ್ರಕ್ಕೆ ಅನ್ಯಾಯ : ಶಿವಾನಂದ ಪಾಟೀಲ ಸೋಮಜಾಳ
ವಿಜಯಪುರ:- ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರೈತರ ಬಹುದಿನದ ಬೇಡಿಕೆಯಾಗಿರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯು ಪೂರ್ಣಗೊಳ್ಳದೆ ರೈತರು ನೀರಾವರಿ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಇದರ ಕುರಿತು ಗಮನಹರಿಸುತ್ತಿಲ್ಲ ಎಂದು ಜೆಡಿಎಸ್ ರೈತ ಮುಖಂಡರಾದ ಶಿವಾನಂದ ಪಾಟೀಲ ಸೋಮಜಾಳ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುರಪುರದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪ್ರಮುಖ ಕೇಂದ್ರವಾದ ಕೆಂಭಾವಿಗೆ ಸಿಂದಗಿ ಕ್ಷೇತ್ರದ ನೂರಾರು ರೈತರೊಂದಿಗೆ ತೆರಳಿದ ಅವರು ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಿಂದಗಿ ಕ್ಷೇತ್ರದ ಜೀವನಾಡಿಯಂತೆ ಬಿಂಬಿಸಿಕೊಳ್ಳುವ ಮೂಲಕ ಈ ಭಾಗದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಹರಿಸುವ ಪ್ರಮುಖವಾದ ಹಾಗೂ ಅತ್ಯಂತ ಅವಶ್ಯಕತೆಯಿಂದ ಕೂಡಿರುವ ರಾಜ್ಯದ ಪ್ರಮುಖ ಯೋಜನೆಯಾಗಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ದಿ,ಮಾಜಿ ಸಚಿವ ಎಂ ಸಿ ಮನಗೂಳಿಯವರು ಸಿಂದಗಿ ಕ್ಷೇತ್ರದ ಜನರಿಗೆ ಅವಿಸ್ಮರಣೀಯವಾದ ಕೊಡುಗೆಯ ರೂಪದಲ್ಲಿ ಈ ಯೋಜನೆಯನ್ನು ನೀಡಿದ್ದಾರೆ ಎಂದು ಹಿರಿಯ ನಾಯಕರ ರೈತಪರ ನಿಲುವನ್ನು ನೆನಪಿಸಿಕೊಂಡರು.
ಈಗಾಗಲೇ ದಶಕಗಳೇ ಕಳೆದರೂ ಇದುವರೆಗೂ ಯೋಜನೆ ಪೂರ್ಣಗೊಳ್ಳದೆ ಕೇವಲ ಹಣ ಬಿಡುಗಡೆ ಮಾಡಿಸುವ ನೆಪತ್ಯಕ್ಕಷ್ಟೇ ಈ ಯೋಜನೆ ಸೀಮಿತವಾಗಿರುವುದು ಸಿಂದಗಿ ಕ್ಷೇತ್ರದ ದುರಂತವಾಗಿದೆ ಎಂದರು.
ಇನ್ನೂ ಸ್ಥಳೀಯ ಶಾಸಕರೂ ಸಹ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ರೈತರಿಗೆ ಕೊಟ್ಟ ಮಾತಿನಂತೆ ನಡೆಯದೆ ಕ್ಷೇತ್ರದ ಅನ್ನದಾತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.ಅಲ್ಲದೆ ಸದನದಲ್ಲಿ ನೀರು ಹರಿಸುವ ಭರವಸೆ ನೀಡಿರುವ ಸ್ಥಳೀಯ ಶಾಸಕರು ನೀರು ಹರಿಸಿದ್ರಾ ? ಎಂದು ಪ್ರಶ್ನಿಸುವ ಮೂಲಕ ಅದಕ್ಕೆ ಜೆಡಿಎಸ್ ಸರ್ಕಾರನೇ ಬರಬೇಕು ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ನೂರಾರು ಕಿಲೋಮೀಟರ್ ದೂರದಿಂದ ನೀರು ಹರಿಸಿ ಬರಡಾದ ಭೂತಾಯಿಯ ಒಡಲು ತಣಿಸುವ ನಿಟ್ಟಿನಲ್ಲಿ ಅಂದಿನ ಜೆಡಿಎಸ್ ಸರ್ಕಾರ ಮಹತ್ತರ ಮೈಲುಗಲ್ಲು ಸಾಧಿಸಿತ್ತು ಆದರೆ ಕ್ರಮೇಣ ರಾಜಕಾರಣದ ಸುಳಿಗೆ ಸಿಲುಕಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯು ಒದ್ದಾಡುತ್ತಲೇ ಬರುತ್ತಿದೆ ಎಂದ ಅವರು ಇದಕ್ಕೆ ರಾಜ್ಯ ಸರ್ಕಾರದ ನೀರಾವರಿ ಸಚಿವರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಈ ಯೋಜನೆ ಹಳ್ಳ ಹಿಡಿಯುತ್ತಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರಮುಖವಾಗಿ ಈ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕಾಗಿ ಆಗ್ರಹಿಸಿ ತಾಂಬಾದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕರುಣೆಯಿಲ್ಲದ ಕಲ್ಲು ಹೃದಯದ ರಾಜ್ಯ ಸರ್ಕಾರಕ್ಕೆ ಅನ್ನದಾತನ ಕಣ್ಣೀರಿನ ಬೆಲೆ ತಿಳಿಯದಿರುವುದು ಆಡಳಿತ ಯಂತ್ರದ ರೈತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ಅಂದು 1976ರಿಂದ ಪ್ರಾರಂಭವಾದ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯು ಇಂದಿನವರೆಗೂ ಪೂರ್ಣಗೊಳ್ಳದೆ ಇರುವುದು ಎರಡೂ ರಾಷ್ಟೀಯ ಪಕ್ಷಗಳ ಜನವಿರೋಧಿ,ರೈತ ವಿರೋಧಿ ನಿಲುವುಗಳನ್ನು ನೋಡಿದಾಗ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಿಡಿಕಾರಿದರು.
ತಕ್ಷಣ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯ ಮಾಡಿದರು.
ಈ ವೇಳೆ ಗೊಲ್ಲಾಳಪ್ಪಗೌಡ ಪಾಟೀಲ,ಸಿದ್ದಣಗೌಡ ಪಾಟೀಲ, ಬಸನಗೌಡ ಪಾಟೀಲ್, ಮಹಾಂತೇಶ ಪರಗೊಂಡ, ಪ್ರಶಾಂತ್ ಸಾಲೋಟಗಿ, ನಾಗೇಶ್ ಸಾಸಬಾಳ,ಮಡು ಹಡಪದ, ಎಮ್ ಡಿ ಕೋರವಾರ, ರಫೀಕ್ ಆಲಮೇಲ,ಸಲೀಂ ಖಾನಾಪುರ ಸೇರಿದಂತೆ ನೂರಾರು ರೈತರು ಜೆಡಿಎಸ್ ಕಾರ್ಯಕರ್ತರು ಇದ್ದರು.