
ಅ.13 ಕ್ಕೆ ಸವದತ್ತಿಗೆ ಸಿಎಂ ಆಗಮನ ; ದೇವಸ್ಥಾನಕ್ಕೆ ಭೇಟಿಕೊಟ್ಟ ಜಿಲ್ಲಾಡಳಿತ

ಸವದತ್ತಿ : ಅ. 13 ರಂದು 21 ಕೋಟಿ ವೆಚ್ಚದ ವಿವಿಧ ಕಟ್ಟಡಗಳಿಗೆ ಚಾಲನೆ ನೀಡಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು ಪೂರ್ವ ತಯಾರಿಯಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸಿಎಂ ಸಿದ್ದರಾಮಯ್ಯ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಪೂರ್ವ ಸಿದ್ಧತೆ ಕುರಿತು ಮಾತನಾಡಿದರು. ಮುಖ್ಯಮಂತ್ರಿಗಳ ಆಗಮನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
ದೇವಸ್ಥಾನಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕ್ರಮವಹಿಸಲಿದ್ದಾರೆ. ಸ್ವಚ್ಛತೆ ಕುರಿತು ಸಾಕಷ್ಟು ದೂರುಗಳು ಬಂದಿದ್ದು ಶಾಸಕರು ಸೇರಿದಂತೆ ದೇವಸ್ಥಾನದ ಅಭಿವೃದ್ಧಿಗಾಗಿ ಎಲ್ಲರೂ ಸಿದ್ದರಿದ್ದೇವೆ.
ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಲಕ್ಷಾಂತರ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಮಾಸ್ಟರ್ ಪ್ಲಾನ್ ಸಿದ್ದವಾಗಿದೆ. ದೇವಸ್ಥಾನ ಅಭಿವೃದ್ಧಿ ಪಡಿಸುವ ಮೂಲಕ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು ಸಿಎಂ ಭೇಟಿ ಬಹಳ ಮಹತ್ವ ಪಡೆದಿದೆ. ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ ಸ್ವಚ್ಛತೆಗೆ ಕ್ರಮವಿರಿಸಲಾಗುವುದು. ಆದಷ್ಟು ಬೇಗ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.
ಈ ವೇಳೆ ಎಸ್ ಪಿ ಭೀಮಾಶಂಕರ ಗುಳೇದ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಲೂಕ ಪಂಚಾಯತ ಇಒ ಆನಂದ ಬಡಕುಂದ್ರಿ, ಪಿಐ ಧರ್ಮಾಕರ ಧರ್ಮಟ್ಟಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿಬಿ ಮಹೇಶ್, ಪಿಡಬ್ಲೂಡಿ ಎಇಇ ವಿಜಯ ಸಂಗಪ್ಪಗೋಳ, ಆರೋಗ್ಯಧಿಕಾರಿ ಶ್ರೀಪಾದ ಸಬನಿಸ ಸೇರಿ ಅಧಿಕಾರಿಗಳು ಇದ್ದರು.