ಬೆಳಗಾವಿ : ಡಿ.ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿ ಇರುವ ಮಹಿಳಾ ಕೋಟಾದ ಸಚಿವ ಸ್ಥಾನಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರು ಮುಂಚೂಣಿಯಲ್ಲಿದೆ. ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಹೆಬ್ಬಾಳಕರ್ ಪರ ಧ್ವನಿ ಎತ್ತಿದ್ದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಂಪುಟ ಪುನಾರಚನೆ ಸಂದರ್ಭದಲ್ಲಿ ಈ ಬಾರಿ ಮಹಿಳೆಯರಿಗೆ ಅವಕಾಶ ನೀಡಲಾಗಿಲ್ಲ. ಸಧ್ಯ ಉಳಿದ ಏಕೈಕ ಸ್ಥಾನಕ್ಕೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಉಮಾಶ್ರೀ ಹೆಸರೂ ಕೇಳಿಬರುತ್ತಿದ್ದು ಈಗ ಹೆಬ್ಬಾಳಕರ್ ಪರ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದು ಸಾಕಷ್ಟು ಚರ್ಚೆ ಮೂಡಿಸಿದೆ.
ಬೆಳಗಾವಿ ಜಿಲ್ಲಾ ರಾಜಕಾರಣ ಗಮನಿಸಿದರೆ ಸಧ್ಯ ಲಕ್ಷ್ಮಣ ಸವದಿ ಡಿ.ಕೆ ಸಂಪುಟದಲ್ಲಿ ಸಚಿವರಾಗಿದ್ದು ಬೆಳಗಾವಿಯಲ್ಲಿ ಜಾರಕಿಹೊಳಿ ಹೊರತಾಗಿ ಮತ್ತೊಂದು ಶಕ್ತಿ ಕೇಂದ್ರ ನಿರ್ಮಾಣವಾಗಿದೆ. ಜೊತೆಗೆ ಸವದಿ ಹಾಗೂ ಜಾರಕಿಹೊಳಿ ಕುಟುಂಬದ ನಡುವಿನ ಹಳೆಯ ವೈರತ್ವವು ಇದ್ದು ಇದೆಲ್ಲ ಆಟವನ್ನು ಬದಿಗಿಟ್ಟು ಸತೀಶ್ ಜಾರಕಿಹೊಳಿ ಹೆಬ್ಬಾಳಕರ್ ಬೆನ್ನಿಗೆ ನಿಂತಿದ್ದು ಕುತೂಹಲ ಮೂಡಿಸಿದೆ.


